ಎಂ.ಕೆ. ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಶನಿವಾರ ಅವರು ಚೆನ್ನೈನಲ್ಲಿ ಸಾರ್ವಜನಿಕ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಜನಸಾಮಾನ್ಯರಲ್ಲಿ ತಾವೂ ಒಬ್ಬರೆನಿಸಿಕೊಂಡರು.
ಈ ಸಂದರ್ಭದಲ್ಲಿ ಅವರು ಸರ್ಕಾರಿ ಸಿಟಿ ಬಸ್ ಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಪ್ರಯಾಣಿಕರು ಮತ್ತು ನಿರ್ವಾಹಕರ ಜೊತೆ ಉಭಯ ಕುಶಲೋಪರಿ ಮಾತನಾಡಿದರು.
ಇದಲ್ಲದೇ, ಸ್ಟಾಲಿನ್ ಅವರು ಡಿಎಂಕೆ ಸಂಸ್ಥಾಪಕರಾದ ಅಣ್ಣಾದೊರೈ ಮತ್ತು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ನಂತರ ತಮಿಳುನಾಡು ವಿಧಾನಸಭೆಯಲ್ಲಿ ಭಾಷಣ ಮಾಡಿದ ಸ್ಟಾಲಿನ್, 1 ರಿಂದ 5 ನೇ ತರಗತಿ ಮಕ್ಕಳಿಗೆ ಉಚಿತ ಬೆಳಗಿನ ಉಪಹಾರ, ಶಾಲಾ ಮಕ್ಕಳಿಗೆ ವೈದ್ಯಕೀಯ ತಪಾಸಣೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ದೊಡ್ಡ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರು.