ವಿಲ್ಲುಪುರಂ: ತಮಿಳುನಾಡಿನ ಮೇಲ್ಪತಿ ಗ್ರಾಮದ ದಲಿತರ ವಸತಿ ಪ್ರದೇಶದಲ್ಲಿ ವಾಸಿಸುವ 450 ಕ್ಕೂ ಹೆಚ್ಚು ಮತದಾರರು ಈಗಿರುವ ಮತಗಟ್ಟೆಗೆ ಹೋಗಲು ಭಯಪಟ್ಟು ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿದ್ದಾರೆ.
ಏಪ್ರಿಲ್ 2023 ರಲ್ಲಿ ಗ್ರಾಮದ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ಹಲವಾರು ದಲಿತ ನಿವಾಸಿಗಳ ಮೇಲೆ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಹೀಗಾಗಿ ಭಯದಿಂದ ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದಲಿತರು, ಅವಕಾಶ ಸಿಕ್ಕಾಗಲೆಲ್ಲ ನಮ್ಮನ್ನು ಸಂಘರ್ಷಕ್ಕೆ ಎಳೆಯುವ ‘ಜಾತಿ ಹಿಂದೂಗಳು ಮತ್ತು ಅವರ ತಂತ್ರಗಳಿಗೆ ನಾವು ಭಯಪಡುತ್ತೇವೆ. ಮೇಲ್ಪತಿಯ ಮತಗಟ್ಟೆಯು ಜಾತಿ ಹಿಂದೂ ಪ್ರದೇಶದಲ್ಲಿದೆ. ಮತದಾನದ ದಿನ ನಾವು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ. ಹೀಗಾಗಿ ನಮಗೆ ಮತ ಚಲಾಯಿಸಲು ಪ್ರತ್ಯೇಕ ಮತಗಟ್ಟೆ ಬೇಕು ಎಂದು ಒತ್ತಾಯಿಸಿದ್ದಾರೆ.
ಭಯದಿಂದಲ್ಲ, ನಮ್ಮ ಆತ್ಮಗೌರವ ಮತ್ತು ಘನತೆಯನ್ನು ಕಾಪಾಡುವುದಕ್ಕಾಗಿ ನಾವು ಪ್ರತ್ಯೇಕ ಮತಗಟ್ಟೆಯನ್ನು ಕೇಳುತ್ತಿದ್ದೇವೆ. ಒಂದು ವರ್ಷದ ಹಿಂದೆ ನಮ್ಮ ಸಂಬಂಧಿಕರನ್ನು ದೇವಸ್ಥಾನಕ್ಕೆ ಪ್ರವೇಶಿಸಿದ ಕಾರಣಕ್ಕೆ ಜಾತಿ ಹಿಂದೂಗಳು ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದರು, ನಂತರ ನಾವು ಅವರೊಂದಿಗಿನ ಸಂಬಂಧವನ್ನು ಕಡಿತಗೊಳಿಸಬೇಕಾಯಿತು. ನಮ್ಮನ್ನು ಕೃಷಿ ಕಾರ್ಮಿಕರಾಗಿ ನೇಮಿಸಿಕೊಳ್ಳುವುದನ್ನೂ ನಿಲ್ಲಿಸಿದ್ದಾರೆ. ಅವರಲ್ಲಿ ಯಾರನ್ನೂ ಜಾತಿ ತಾರತಮ್ಯಕ್ಕಾಗಿ ಇಂದಿಗೂ ಬಂಧಿಸಲಾಗಿಲ್ಲ. ಘಟನೆಯನ್ನು ನಿಭಾಯಿಸುವಲ್ಲಿ ಸರ್ಕಾರದ ನಿಷ್ಕ್ರಿಯತೆ ಮತ್ತು ಪೊಲೀಸರ ನಿರಾಸಕ್ತಿ ತೋರಿದೆ. ಇದೇ ಕಾರಣಕ್ಕೆ ದಲಿತರಿಗೆ ಮತದಾನದ ದಿನದಂದು ಭದ್ರತೆಯ ಆತಂಕವಿದೆ ಎಂದು ಯುವಕನೊಬ್ಬ ಹೇಳಿದ್ದಾನೆ.
ಮೇಲ್ಪತಿ ದಲಿತರು ಮೇಲ್ಪತಿಯ ತಮ್ಮ ಬದಿಯಲ್ಲಿರುವ ಖಾಲಿ ಗ್ರಾಮ ಸೇವಾ ಕೇಂದ್ರ ಕಟ್ಟಡದಲ್ಲಿ ಪ್ರತ್ಯೇಕ ಮತಗಟ್ಟೆಗಾಗಿ ಪ್ರಸ್ತಾಪಿಸಿದ್ದಾರೆ. ಆದರೆ, ಮತದಾರರ ಸಂಖ್ಯೆ 1,500ಕ್ಕಿಂತ ಹೆಚ್ಚಿದ್ದರೆ ಮಾತ್ರ ಬೂತ್ ಹಂಚಿಕೆ ಮಾಡಬಹುದು ಎಂದು ಹೇಳಲಾಗಿದೆ.
ನಾವು ಮೇಲ್ಪತಿ ಮತಗಟ್ಟೆಯನ್ನು ನಿರ್ಣಾಯಕ ಮತಗಟ್ಟೆ ಎಂದು ಗುರುತಿಸಿದ್ದೇವೆ. ಸಿಆರ್‌ಪಿಎಫ್ ಸಿಬ್ಬಂದಿಯಿಂದ ವಿಶೇಷ ರಕ್ಷಣೆ, ಲೈವ್ ವೆಬ್‌ಕ್ಯಾಮ್ ಕಾಸ್ಟಿಂಗ್, ರಾಜ್ಯ ಪೊಲೀಸ್ ಪಡೆ ಮತ್ತು ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಿದ್ದು, ದಲಿತರು ಶಾಂತಿಯಿಂದ ಮತ ಚಲಾಯಿಸಬಹುದು. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಚುನಾವಣೆಯ ದಿನದಂದು ದಲಿತರೊಂದಿಗೆ ಜಗಳವಾಡಿದಲ್ಲಿ ಜಾತಿ ಹಿಂದೂ ನಿವಾಸಿಗಳ ವಿರುದ್ಧ ಕಠಿಣ ಪೊಲೀಸ್ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.