ತಮಿಳುನಾಡಿನ ವ್ಯಕ್ತಿಯೊಬ್ಬ ಕದ್ದ ಬೈಕ್ ಅನ್ನು ಅದರ ಮಾಲೀಕ ವೀರಮಣಿಗೆ ಕ್ಷಮೆ ಪತ್ರ ಮತ್ತು ಹಣದೊಂದಿಗೆ ಹಿಂದಿರುಗಿಸಿರುವುದು ಗಮನಾರ್ಹ ಘಟನೆಯಾಗಿದೆ. ಗುರುತು ಪತ್ತೆಯಾಗದ ವ್ಯಕ್ತಿಯೊಬ್ಬ ತನ್ನ ಪತ್ರದಲ್ಲಿ, ಕೆಲವು ಸಂದರ್ಭಗಳು ತನಗೆ ವೀರಮಣಿಯ ದ್ವಿಚಕ್ರ ವಾಹನವನ್ನು ಅನುಮತಿಯಿಲ್ಲದೆ ತೆಗೆದುಕೊಳ್ಳುವಂತೆ ಮಾಡಿತು ಎಂದು ಉಲ್ಲೇಖಿಸಿದ್ದಾನೆ. ತುರ್ತು ಪರಿಸ್ಥಿತಿಯಿಂದಾಗಿ ತಾನು ಪಾರ್ಕಿಂಗ್‌ನಿಂದ ಬೈಕ್ ತೆಗೆದು ತನ್ನ ಗಮ್ಯಸ್ಥಾನಕ್ಕೆ ಓಡಿಸಬೇಕಾಯಿತು ಎಂದು ಹೇಳಿದ್ದಾನೆ.
ಮೊದಲಿಗೆ, ಬೈಕ್ ಕಾಣೆಯಾದಾಗ, ಮಾಲೀಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೆಲವು ದಿನಗಳ ನಂತರ, ವೀರಮಣಿ ತನ್ನ ಮನೆಯ ಮುಂದೆ ಬೈಕ್ ಕಂಡು ಅಚ್ಚರಿಗೊಳಗಾಗಿದ್ದಾರೆ. ಬೈಕ್ ಹೇಗೆ ಕಾಣೆಯಾಯಿತು ಮತ್ತು ಹೇಗೆ ಹಿಂದಿರುಗಿತು ಎಂದು ಗೊಂದಲಕ್ಕೊಳಗಾಗಿದ್ದಾಗ, ವ್ಯಕ್ತಿಯ ಪತ್ರವನ್ನು ನೋಡಿದ್ದಾರೆ. ವರದಿಗಳ ಪ್ರಕಾರ, ಫೆಬ್ರವರಿ 24 ರಂದು, ಮಾಲೀಕರು ತಮ್ಮ ಬೈಕ್ ಅನ್ನು ಮರಳಿ ಪಡೆದಿದ್ದು, ಅದನ್ನು ವ್ಯಕ್ತಿಯೊಬ್ಬ ಕ್ಷಮೆ ಪತ್ರ ಮತ್ತು ಪರಿಹಾರವಾಗಿ 1,500 ರೂಪಾಯಿಗಳೊಂದಿಗೆ ಹಿಂದಿರುಗಿಸಿದ್ದಾನೆ. ಅಲ್ಲದೇ ಕದ್ದ ವಾಹನವನ್ನು ಅದರ ಮಾಲೀಕರಿಗೆ ಹಸ್ತಾಂತರಿಸಲು 450 ಕಿಲೋಮೀಟರ್ ಪ್ರಯಾಣಿಸಿದ್ದಾನೆ ಎಂದು ತಿಳಿದುಬಂದಿದೆ.
ಮಾಲೀಕರಿಗೆ ಉಂಟಾದ ಅನಾನುಕೂಲತೆ ಮತ್ತು ಚಿಂತೆಗೆ ವಿಷಾದ ವ್ಯಕ್ತಪಡಿಸಿರುವ ಆ ವ್ಯಕ್ತಿ, ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ 1,500 ರೂಪಾಯಿಗಳನ್ನು ಇರಿಸಿದ್ದಾನೆ. “ನಿಮ್ಮ ಬೈಕ್ ತುರ್ತು ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿತು. ನಾನು ನಿಮಗೆ ಋಣಿಯಾಗಿದ್ದೇನೆ. ದಯವಿಟ್ಟು ಈ ಹಣವನ್ನು ಸ್ವೀಕರಿಸಿ ಮತ್ತು ನನ್ನನ್ನು ಕ್ಷಮಿಸಿ” ಎಂದು ಪತ್ರದಲ್ಲಿ ಬರೆಯಲಾಗಿದೆ.