ಮುಂಬೈ: ಸೋಮವಾರ ಓಮನ್‌ನ ಮಸ್ಕತ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನದ(ಯುಕೆ-234) ವಾಶ್ ರೂಮ್ ನೊಳಗೆ ಧೂಮಪಾನ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು 51 ವರ್ಷದ ಬಾಲಕೃಷ್ಣ ರಾಜಯನ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿ ಮೂಲದ ಬಾಲಕೃಷ್ಣ ವಿಮಾನದ ವಾಶ್ ರೂಮ್ ನಲ್ಲಿ ಧೂಮಪಾನ ಮಾಡಿದ್ದು, ಪೈಲಟ್ ಸ್ಮೋಕ್ ಡಿಟೆಕ್ಟರ್ ಸಹಾಯದಿಂದ ಅದನ್ನು ಕಂಡು ಕ್ಯಾಬಿನ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಪೈಲಟ್ ಎಚ್ಚರಿಕೆ ನೀಡಿದ ನಂತರ ಸಿಬ್ಬಂದಿ ವಾಶ್ ರೂಮ್ ಪರಿಶೀಲಿಸಿದಾಗ ವಾಶ್ ಬೇಸಿನ್‌ನಲ್ಲಿ ಸಿಗರೇಟ್ ಬಡ್ ಕಂಡುಬಂದಿದೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ, ಸಿಬ್ಬಂದಿ ಘಟನೆಯ ಬಗ್ಗೆ ಮೈದಾನದಲ್ಲಿದ್ದ ಭದ್ರತಾ ಮೇಲ್ವಿಚಾರಕರಿಗೆ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಬಾಲಕೃಷ್ಣ ವಾಶ್‌ರೂಮ್‌ನಲ್ಲಿ ಧೂಮಪಾನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಸಿಗರೇಟ್ ಹಚ್ಚಲು ಬಳಸುತ್ತಿದ್ದ ಬೆಂಕಿಕಡ್ಡಿಯನ್ನು ತೋರಿಸಿದ್ದಾರೆ. ಅವರನ್ನು ಸಹರ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಲಾಗಿದೆ. ಅಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಅವರು ಉದ್ದೇಶಪೂರ್ವಕವಾಗಿ ವಿಮಾನದೊಳಗೆ ಧೂಮಪಾನ ಮಾಡುವ ಮೂಲಕ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ. ಭಾರತೀಯ ದಂಡ ಸಂಹಿತೆ, ವಿಮಾನ ನಿಯಮಗಳ ಸೆಕ್ಷನ್ 25 ರ ಅಡಿಯಲ್ಲಿ ಪ್ರಯಾಣಿಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಸಹರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.