ಮಧುರೈ: ತಮಿಳುನಾಡಿನ ಮಧುರೈ ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 16 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಗೋರಿಪಾಳ್ಯಂನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ರಕ್ಷಿಸಲ್ಪಟ್ಟ ಬಾಲಕಿಯ ಚಿಕ್ಕಮ್ಮ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಒಳಪಡಿಸಿರುವುದು ದಾಳಿ ವೇಳೆ ಗೊತ್ತಾಗಿದೆ. ಸಂತ್ರಸ್ತೆಯ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ತೆಂಗಿನಕಾಯಿ ವ್ಯಾಪಾರ ಮಾಡುವ ಆಕೆಯ ತಾಯಿ ಐವರು ಹೆಣ್ಣು ಮಕ್ಕಳನ್ನು ಸಾಕಲು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಬಳಿಗೆ ಕಳಿಸಿದ್ದಳು.
ಚಿಕ್ಕಮ್ಮ ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಳು. ಕಳೆದ ಒಂದು ವರ್ಷದಿಂದ ಆಕೆಗೆ ಬಲವಂತ ಮಾಡಲಾಗಿದೆ ಎಂದು ತಲ್ಲಕುಲಂ ಮಹಿಳಾ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಭುವನೇಶ್ವರಿ ತಿಳಿಸಿದ್ದು, ಆರೋಪಿಗಳು ಆಗಾಗ ತಮ್ಮ ದಂಧೆ ಕಾರ್ಯ ಸ್ಥಳವನ್ನು ಬದಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ.