ಚೆನ್ನೈ: ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನ್ಯಾಯಾಧೀಶರು ‘ವಾಟ್ಸಾಪ್’ ಮೂಲಕ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಭಾನುವಾರ ನಾಗರ್ ಕೋಯಿಲ್ ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ವಾಟ್ಸಾಪ್ ಮೂಲಕ ವಿಚಾರಣೆ ನಡೆಸಿದ್ದಾರೆ.
ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇವಸ್ಥಾನದ ‘ರಥ'(ಕಾರ್) ಉತ್ಸವವನ್ನು ಸೋಮವಾರ ನಡೆಸಬೇಕಿತ್ತು. ಆದರೆ, ಅಗ್ನಿ ಅವಘಡದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಉತ್ಸವ ನಡೆಸದಿದ್ದರೆ ತಮ್ಮ ಗ್ರಾಮವು ‘ದೇವರ ಕೋಪಕ್ಕೆ ಗುರಿಯಾಗಲಿದೆ’. ಕೂಡಲೇ ವಿಚಾರಣೆ ನಡೆಸಬೇಕೆಂದು ಆನುವಂಶಿಕ ಧರ್ಮದರ್ಶಿ ಪಿ.ಆರ್. ಶ್ರೀನಿವಾಸನ್ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳು ವಾಟ್ಸಾಪ್ ನಲ್ಲೇ ವಿಚಾರಣೆ ನಡೆಸಿದ್ದಾರೆ.
ಇದು ತ್ರಿಕೋನ ಅಧಿವೇಶನವಾಗಿದ್ದು, ನ್ಯಾಯಾಧೀಶರು ನಾಗರ್ ಕೋಯಿಲ್ ನಿಂದ ಪ್ರಕರಣವನ್ನು ಆಲಿಸಿದರು, ಅರ್ಜಿದಾರರ ವಕೀಲರು ಒಂದು ಸ್ಥಳದಲ್ಲಿ ಮತ್ತು ಅಡ್ವೊಕೇಟ್ ಜನರಲ್ ಆರ್. ಷಣ್ಮುಗಸುಂದರಂ ಮತ್ತೊಂದು ಸ್ಥಳದಲ್ಲಿದ್ದರು.
ದೇವಸ್ಥಾನದ ಆನುವಂಶಿಕ ಟ್ರಸ್ಟಿಗೆ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಲು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಂಬಂಧಿಸಿದ ಇನ್ಸ್ ಪೆಕ್ಟರ್ ಗೆ ಅಧಿಕಾರವಿಲ್ಲ ಎಂದು ಪರಿಗಣಿಸಿದ ನ್ಯಾಯಾಧೀಶರು ಅದನ್ನು ರದ್ದುಗೊಳಿಸಿದರು.
ಉತ್ಸವಗಳನ್ನು ನಡೆಸುವಾಗ ಸರ್ಕಾರವು ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಪ್ರದೇಶದಲ್ಲಿ ಪ್ರಾರಂಭದಿಂದ ಕೆಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.
ಕಳೆದ ತಿಂಗಳು ತಂಜಾವೂರು ಬಳಿ ದೇವಸ್ಥಾನದ ರಥವೊಂದು ಮೆರವಣಿಗೆ ವೇಳೆ ಹೈ ಟೆನ್ಶನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶದಿಂದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದರು.