
ನವದೆಹಲಿ: ಚೆನ್ನೈ ಫೋರ್ಟ್ ರೈಲು ನಿಲ್ದಾಣದಲ್ಲಿ ನೇಮ್ ಬೋರ್ಡ್ ನಲ್ಲಿ ಹಿಂದಿ ಅಕ್ಷರಗಳಿಗೆ ಕಪ್ಪು ಬಣ್ಣ ಬಳಿದಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಮಿಳು ಮತ್ತು ಇಂಗ್ಲಿಷ್ ಅಕ್ಷರಗಳನ್ನು ಬಿಟ್ಟು ಹಿಂದಿ ಅಕ್ಷರಗಳ ಮೇಲೆ ಕಪ್ಪು ಬಣ್ಣ ಬಳಿಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವ ಇಬ್ಬರು ವ್ಯಕ್ತಿಗಳನ್ನು ಹುಡುಕುತ್ತಿದ್ದೇವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ರೈಲ್ವೆ ನಿಲ್ದಾಣದಲ್ಲಿ ಹಲವಾರು ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ. ನಂತರ, ನಾಮಫಲಕದಲ್ಲಿ ಚೆನ್ನೈ ಫೋರ್ಟ್ ರೈಲು ನಿಲ್ದಾಣದ ಹಿಂದಿ ಅಕ್ಷರಗಳ ಮೇಲಿನ ಮಸಿ ತೆಗೆಯಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೊಸರು ಪ್ಯಾಕೇಟ್ ಲೇಬಲ್ ಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಆಹಾರ ಗುಣಮಟ್ಟದ ಪ್ರಾಧಿಕಾರ -ಎಫ್ಎಸ್ಎಸ್ಎಐ ನಿರ್ಧಾರವನ್ನು ಟೀಕಿಸಿದ್ದರು. ಅದಾಗಿ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.