ಕೊಯಮತ್ತೂರು: ತಮಿಳುನಾಡಿನ ಪೊಲ್ಲಾಚಿ ಸಮೀಪದ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಹುಡುಗಿಯ ಅಜ್ಜ ಮತ್ತು ಗೆಳೆಯ ಸೇರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹುಡುಗಿ 21 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಉಡುಮಲ್ ಪೇಟೆ ಮೂಲದ ಈತ 11ನೇ ತರಗತಿ ವಿದ್ಯಾರ್ಥಿನಿ ಮನೆಯ ಸಮೀಪ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬಾಲಕಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಲಾಗಿದೆ. ಕುಟುಂಬದ ಇತರರಿಗೆ ಹೇಳಲು ಹೆದರಿದ ಆಕೆ ಅಜ್ಜನಿಗೆ ವಿಷಯ ತಿಳಿಸಿದ್ದಾಳೆ.
52 ವರ್ಷದ ವ್ಯಕ್ತಿ ಆಕೆಗೆ ಗರ್ಭಪಾತ ಮಾಡಿಸಲು ವೈದ್ಯಕೀಯ ಸಹಾಯ ಮಾಡಿಸಿದ್ದಾನೆ. ನಂತರ ವ್ಯಕ್ತಿ ತನ್ನ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಗರ್ಭಪಾತದ ಬಗ್ಗೆ ಅವಳ ಪೋಷಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿ ಕೃತ್ಯವೆಸಗಿದ್ದಾನೆ.
ಪದೇ ಪದೇ ಹಲ್ಲೆ ನಡೆಸಿದ್ದರಿಂದ ಸೆಪ್ಟೆಂಬರ್ 17 ರಂದು ಬಾಲಕಿ ಮನೆಯಿಂದ ಓಡಿಹೋಗಿದ್ದಾಳೆ. ಉಡುಮಲ್ ಪೇಟೆಯಲ್ಲಿರುವ ತನ್ನ ಗೆಳೆಯನ ಮನೆಗೆ ಬಂದಿದ್ದು, ಅವರ ಕುಟುಂಬವು ಜೋಡಿಯ ಮದುವೆಗೆ ವ್ಯವಸ್ಥೆ ಮಾಡಿದೆ.
ಬಾಲಕಿ ಮನೆಯಿಂದ ನಾಪತ್ತೆಯಾದ ಕೂಡಲೇ ಮನೆಯವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ಆಕೆಯನ್ನು ಸೆಪ್ಟೆಂಬರ್ 23 ರಂದು ಪೊಲೀಸ್ ಠಾಣೆಗೆ ಹಾಜರುಪಡಿಸುವಂತೆ ಕುಟುಂಬದವರು ಹೇಳಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಇಲಾಖೆಗೆ ತಿಳಿಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಹುಡುಗಿ ಘಟನೆಗಳನ್ನು ಬಹಿರಂಗಪಡಿಸಿ ತನ್ನ ಪ್ರೇಮಿ ಮತ್ತು ಅಜ್ಜನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಯುವಕ, ಅಜ್ಜ, ಅವರಿಗೆ ಸಹಾಯ ಮಾಡಿದ ವ್ಯಕ್ತಿಯ ಸ್ನೇಹಿತ ಮತ್ತು ಯುವಕನ ಚಿಕ್ಕಪ್ಪನ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಬಾಲಕಿಯ ಅಜ್ಜ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಶನಿವಾರ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.