ಕೇರಳ: ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಅರಿಕೊಂಬನ್ ಎಂಬ ಆನೆಯ ಹಾವಳಿ ಜೋರಾಗಿದ್ದು, ಇದರ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಸಜ್ಜಾಗಿದೆ. ಈ ಆನೆ ಇದಾಗಲೇ ಸಿಕ್ಕ ಸಿಕ್ಕ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದು, ಈಗಾಗಲೇ ಇಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಹೊಸೂರು ಸಮೀಪದ ನಾಟ್ರಾಪಲ್ಲಿ ಬಳಿ ಘಟನೆ ನಡೆದಿದೆ. ದನ ಮೇಯಿಸುತ್ತಿದ್ದ ದನಗಾಹಿಯನ್ನ ಕೊಂದು, ಬಳಿಕ ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆ ಮೇಲೂ ದಾಳಿ ಮಾಡಿದೆ. ಇದರ ವಿಡಿಯೋ ವೈರಲ್ ಆಗಿದೆ.
ಕಿಲ್ಲರ್ ಕಾಡಾನೆಗಳ ಉಪಟಳಕ್ಕೆ ಗಡಿ ಗ್ರಾಮ ವಾಸಿಗಳು ಕಂಗಾಲಾಗಿದ್ದು, ಜನರನ್ನು ಕಂಡರೆ ಗುಂಪಿನತ್ತ ನುಗ್ಗುವ ಕಾಡಾನೆಗಳ ಕಾಟಕ್ಕೆ ಜನ ಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ. ಇನ್ನು ಚೆನ್ನೈ ಹೆದ್ದಾರಿಯಲ್ಲಿ ಸಾಗಲು ವಾಹನ ಸವಾರರಿಗೂ ಇದೀಗ ಢವ ಢವ ಶುರುವಾಗಿದೆ. ಆದಷ್ಟು ಬೇಗ ಕಿಲ್ಲರ್ ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇದಾಗಲೇ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ. ಇದೀಗ ತಮಿಳುನಾಡು ಸರ್ಕಾರ ಆನೆಯನ್ನು ಸೆರೆ ಹಿಡಿಯಲು ಅದರ ಜಾಡು ಕಂಡುಹಿಡಿಯಲು ಮುಂದಾಗಿದೆ. ಕಾರ್ಯಪಡೆಯು VHF ಆಂಟೆನಾವನ್ನು ಬಳಸಿಕೊಂಡು ಆನೆಯ ಸ್ಥಾನವನ್ನು ಪತ್ತೆ ಹಚ್ಚುತ್ತಿದೆ. ಶೀಘ್ರವೇ ಆನೆಯನ್ನು ಹಿಡಿಯುವುದಾಗಿ ಸರ್ಕಾರ ಭರವಸೆ ನೀಡಿದೆ.