
ಚೆನ್ನೈ: ಜೈಲು ಸೇರಿರುವ ವಿ ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ವಜಾಗೊಳಿಸಿದ್ದಾರೆ.
ತಮಿಳುನಾಡಿನ ವಿದ್ಯುತ್ ಸಚಿವರಾಗಿದ್ದ ವಿ. ಸೆಂಥಿಲ್ ಬಾಲಾಜಿ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಸೆಂಥಿಲ್ ಅವರನ್ನು ವಜಾಗೊಳಿಸುವುದರೊಂದಿಗೆ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೆ ಮುಂದುವರೆದಂತಾಗಿದೆ.
ವಿ. ಸೆಂಥಿಲ್ ಬಾಲಾಜಿ ಅವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಕಾರಣ ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರು ಇನ್ನು ಮುಂದೆ ಸಚಿವ ಸಂಪುಟದ ಸದಸ್ಯರಾಗಿ ಮುಂದುವರಿಯಲು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ.