ಚೆನ್ನೈ: 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪುನರಾರಂಭಿಸುವ ಕುರಿತು ಸೋಮವಾರ ಪೋಷಕರೊಂದಿಗೆ ರಾಜ್ಯವ್ಯಾಪಿ ಸಮಾಲೋಚನೆ ನಡೆಸಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ನವೆಂಬರ್ 16 ರಿಂದ ತರಗತಿಗಳು ಆರಂಭವಾಗಲಿವೆ ಎಂದು ಈ ಹಿಂದೆಯೇ ಹೇಳಲಾಗಿದೆ. 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 16 ರಿಂದ ತರಗತಿ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕೊರೋನಾ ಸಾಂಕ್ರಾಮಿಕ ರೋಗ ಇರುವಾಗಲೇ ಶಾಲೆ ಆರಂಭಿಸಿ ವಿದ್ಯಾರ್ಥಿ ಮತ್ತು ಅವರ ಕುಟುಂಬದವರನ್ನು ಸರ್ಕಾರ ಅಪಾಯಕ್ಕೆ ದೂಡುತ್ತಿದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಪೋಷಕರು ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಗೆ ಆಗಮಿಸಿ ಶಾಲೆ ಪುನರಾರಂಭದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಘೋಷಣೆ ಮಾಡಲಾಗಿದೆ.