ಚೆನ್ನೈ: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತಾಯಿಯನ್ನು ಕೊಲೆ ಮಾಡಿದ ಘಟನೆ ತೂತುಕುಡಿ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡನಿಂದ ದೂರವಾಗಿದ್ದ ಮಹಿಳೆ ಮೂವರು ಪುತ್ರಿಯರು ಓರ್ವ ಪುತ್ರನೊಂದಿಗೆ ವಾಸಿಸುತ್ತಿದ್ದರು. ಟುಟಿಕೊರಿನ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು.
ಆಕೆಯ 17 ವರ್ಷದ ಹಿರಿಯ ಪುತ್ರಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿದ್ದಳು. ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾದ ನಂತ ಮಹಿಳೆ ಮಗಳಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪುತ್ರಿ ಪ್ರಿಯಕರ ಮತ್ತು ಆತನ ಸಹಚರನ ಸಹಾಯದಿಂದ ಮಲಗಿದ್ದ ವೇಳೆಯಲ್ಲಿ ತಾಯಿಯನ್ನು ಕೊಲೆ ಮಾಡಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಟುಟಿಕೋರಿನ್ ದಕ್ಷಿಣ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪುತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಕೊಲೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿದ್ದ ಪುತ್ರಿ ನಂತರ ಕಟ್ಟುಕತೆ ಕಟ್ಟಿದ್ದಾಳೆ. ತಾಯಿ ತನ್ನನ್ನು ವೇಶ್ಯಾವಾಟಿಕೆಗೆ ನೂಕಲು ಬಲವಂತ ಮಾಡಿದ್ದರಿಂದ ಹತ್ಯೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಪುತ್ರಿಯ ಹೇಳಿಕೆ ಪಡೆದುಕೊಂಡ ಪೊಲೀಸರು, ಕೊಲೆಯಲ್ಲಿ ಭಾಗಿಯಾದ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.