ತಮಿಳುನಾಡಿನ ಪೆರಂಬಲೂರಿನ ಖಾಸಗಿ ಕಾಲೇಜಿನ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿ 35 ವರ್ಷದ ಪ್ರೇಯಸಿಗೆ ವಿಷದ ಇಂಜೆಕ್ಷನ್ ನೀಡಿ, ಆಕೆಯ ಮೃತದೇಹವನ್ನು ಯೇರ್‌ಕಾಡ್ ರಸ್ತೆಯ 30 ಅಡಿ ಆಳದ ಕಂದಕಕ್ಕೆ ಎಸೆದು ಹತ್ಯೆ ಮಾಡಿದ್ದಾನೆ.
ಸೇಲಂ ಗ್ರಾಮಾಂತರ ಪೊಲೀಸರು ಮೃತರನ್ನು ತಿರುಚಿ ಜಿಲ್ಲೆಯ ತುರೈಯೂರ್‌ನ ಎಂ. ಲೋಗನಾಯಕಿ ಅಲಿಯಾಸ್ ಅಲ್ಬಿಯಾ ಎಂದು ಗುರುತಿಸಿದ್ದಾರೆ.
ಪೊಲೀಸರ ಪ್ರಕಾರ, ಲೋಗನಾಯಕಿ ಮತ್ತು ಅಬ್ದುಲ್ ಅಬೀಜ್ (22) ಕೆಲವು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಭೇಟಿಯಾದ ನಂತರ ಪ್ರೇಮ ಸಂಬಂಧ ಹೊಂದಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ.
ಆದರೆ ಅಬ್ದುಲ್ ಅಬೀಜ್ ಬೇರೆಯೇ ಯೋಜನೆ ರೂಪಿಸಿದ್ದ. ಆತ ಲೋಗನಾಯಕಿಯನ್ನು ಮದುವೆಯಾಗಲು ಇಷ್ಟಪಡದೆ ತನ್ನ ಗೆಳತಿಯರಾದ ಅವಡಿಯ ಎಸ್. ತವಿಯಾ ಸುಲ್ತಾನಾ (22), ಐಟಿ ಕಂಪನಿ ಉದ್ಯೋಗಿ ಮತ್ತು ವಿಲ್ಲುಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿ ಆರ್. ಮೋನಿಷಾ (21) ಜೊತೆ ಸೇರಿ ಲೋಗನಾಯಕಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಪೊಲೀಸರ ಪ್ರಕಾರ, ಲೋಗನಾಯಕಿ ಸೇಲಂನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು, ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಮಾರ್ಚ್ 1 ರ ರಾತ್ರಿ ಲೋಗನಾಯಕಿ ಹಾಸ್ಟೆಲ್‌ನಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ, ಕೆಲಸಕ್ಕೂ ಹೋಗಿರಲಿಲ್ಲ. ಆಕೆಯ ಮೊಬೈಲ್ ಫೋನ್ ಸಂಪರ್ಕಕ್ಕೂ ಸಿಗದ ಕಾರಣ, ಹಾಸ್ಟೆಲ್ ವಾರ್ಡನ್ ಸೋಮವಾರ ಸೇಲಂ ಸಿಟಿ ಪೊಲೀಸರಿಗೆ ಕಾಣೆಯಾದ ವ್ಯಕ್ತಿಯ ದೂರು ನೀಡಿದ್ದರು. ಆಕೆಯ ಕೊನೆಯ ಫೋನ್ ಕರೆ ಸಂಭಾಷಣೆಯ ಆಧಾರದ ಮೇಲೆ, ಸೇಲಂ ಪಲ್ಲಾಪಟ್ಟಿ ಪೊಲೀಸರು ಅಬೀಜ್‌ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ಮಾರ್ಚ್ 1 ರ ರಾತ್ರಿ ಯೇರ್‌ಕಾಡ್ ಬೆಟ್ಟಕ್ಕೆ ಕರೆದೊಯ್ದು ವಿಷದ ಇಂಜೆಕ್ಷನ್ ನೀಡಿ ಲೋಗನಾಯಕಿಯನ್ನು ಕೊಲೆ ಮಾಡಿದ್ದಾನೆ ಎಂದು ಅಬೀಜ್, ತವಿಯಾ ಮತ್ತು ಮೋನಿಷಾ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.
ಅಬೀಜ್ ಆಕೆ ಮಾತ್ರವಲ್ಲದೇ, ಅಬೀಜ್ ತವಿಯಾ ಮತ್ತು ಮೋನಿಷಾ ಅವರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಮತ್ತು ಲೋಗನಾಯಕಿ ಸಂಪರ್ಕವನ್ನು ತಪ್ಪಿಸಲು ಪ್ರಾರಂಭಿಸಿದ್ದ. ಕಳೆದ ವಾರ, ಲೋಗನಾಯಕಿ ಗಾಯ ಮಾಡಿಕೊಂಡು ಅಬೀಜ್‌ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಅಬೀಜ್ ಮತ್ತು ಇತರ ಇಬ್ಬರು ಯುವತಿಯರು ಲೋಗನಾಯಕಿಯನ್ನು ಕೊನೆಗಾಣಿಸಲು ಸಂಚು ರೂಪಿಸಿದರು.
ಅದರಂತೆ, ಅವರು ಮಾರ್ಚ್ 1 ರ ಸಂಜೆ ಸೇಲಂಗೆ ತಲುಪಿದ್ದು, ಅಬೀಜ್ ಗಾಯಕ್ಕೆ ನೋವು ನಿವಾರಕ ಬೇಕೇ ಎಂದು ಲೋಗನಾಯಕಿಯನ್ನು ಕೇಳಿದ್ದಾನೆ. ಆ ರಾತ್ರಿ ಯೇರ್‌ಕಾಡ್ ಬೆಟ್ಟಕ್ಕೆ ಕರೆದೊಯ್ದು ಯೇರ್‌ಕಾಡ್ ರಸ್ತೆಯ 60 ಅಡಿ ಸೇತುವೆಯ ಬಳಿ ನಿಲ್ಲಿಸಿ, ಮೋನಿಷಾ ‘ಔಷಧಿ’ಯನ್ನು ಇಂಜೆಕ್ಟ್ ಮಾಡಿದ್ದಾಳೆ. ಲೋಗನಾಯಕಿ ಪ್ರಜ್ಞಾಹೀನಳಾದ ನಂತರ, ಮೂವರು ಆಕೆಯನ್ನು ಕಂದಕಕ್ಕೆ ಎಸೆದರು ಎಂದು ಪೊಲೀಸರು ತಿಳಿಸಿದ್ದಾರೆ. ಅಬೀಜ್ ನೀಡಿದ ಮಾಹಿತಿಯ ಆಧಾರದ ಮೇಲೆ, ಬುಧವಾರ ಲೋಗನಾಯಕಿ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಯೇರ್‌ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.