ಚೆನ್ನೈ: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
8 ಕಿಲೋಮೀಟರ್ ಚೇಸ್ ಮಾಡಿ ಇಡಿ ಅಧಿಕಾರಿಯನ್ನು ಬಂಧಿಸಿದ ಘಟನೆ ದಿಂಡಿಗಲ್ -ಮಧುರೈ ಹೆದ್ದಾರಿ ಬಳಿ ಶುಕ್ರವಾರ ನಡೆದಿದೆ. ತಮಿಳುನಾಡು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಅಧಿಕಾರಿಗಳ ತಂಡ ಮಧುರೈನ ಇಡಿ ಉಪವಿಭಾಗೀಯ ಕಚೇರಿ ಮೇಲೆ ದಾಳಿ ನಡೆಸಿದೆ.
ಅಂಕಿತ್ ತಿವಾರಿ ಬಂಧಿತ ಅಧಿಕಾರಿಯಾಗಿದ್ದು, 2016ನೇ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಮಧುರೆ ಇಡಿ ಉಪವಿಭಾಗೀಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರನಿಗೆ 3 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟು 20 ಲಕ್ಷ ರೂ. ಹಣ ಸುಲಿಗೆ ಮಾಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಜಾರಿ ನಿರ್ದೇಶನಾಲಯ ಅಧಿಕಾರಿಯನ್ನು ಮಧುರೈನಲ್ಲಿ ಬಂಧಿಸಲಾಗಿದೆ. ನಡೆಯುತ್ತಿರುವ ತನಿಖೆಯ ಭಾಗವಾಗಿ ಪೊಲೀಸರು ನಗರದ ಕೇಂದ್ರೀಯ ಸಂಸ್ಥೆಯ ಕಚೇರಿಗಳು ಮತ್ತು ಅಧಿಕಾರಿಯ ನಿವಾಸವನ್ನು ಶೋಧಿಸಿದ್ದಾರೆ. ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಅಧಿಕಾರಿ ಅಂಕಿತ್ ತಿವಾರಿ ಅವರನ್ನು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜಾರಿ ನಿರ್ದೇಶನಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.