
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತಂಡದ ಸಚಿವ ಸಂಪುಟ ಪುನಾರಚನೆಯ ಭಾಗವಾಗಿ ಭಾನುವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾಮೀನು ಪಡೆದಿದ್ದ ಸೆಂಥಿಲ್ ಬಾಲಾಜಿ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇತರ ಮೂವರು ಶಾಸಕರಾದ ಗೋವಿ ಚೆಜಿಯಾನ್, ಎಸ್.ಎಂ. ನಾಸರ್ ಮತ್ತು ಕೆ.ಎಸ್. ಮಸ್ತಾನ್ ಕೂಡ ಚೆನ್ನೈನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ಎನ್. ರವಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಉಪ ಮುಖ್ಯಮಂತ್ರಿಯಾದ ಉದಯನಿಧಿ ಸ್ಟಾಲಿನ್
ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಅವರ ಅಜ್ಜ ಮತ್ತು ಡಿಎಂಕೆ ಹಿರಿಯ ದಿ. ಎಂ ಕರುಣಾನಿಧಿ ಮತ್ತು ಅವರ ತಂದೆ ಎಂ.ಕೆ. ಸ್ಟಾಲಿನ್ ನಂತರ ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಪಾತ್ರವನ್ನು ಪಡೆದ ಅವರ ಕುಟುಂಬದಲ್ಲಿ ಮೂರನೇ ತಲೆಮಾರಿನ ನಾಯಕರಾಗಿದ್ದಾರೆ. ಕರುಣಾನಿಧಿ ಹಲವಾರು ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಮಗ ಎಂ.ಕೆ. ಸ್ಟಾಲಿನ್ 2021 ರಲ್ಲಿ ಮುಖ್ಯಮಂತ್ರಿಯಾದರು.
46 ವರ್ಷದ ಉದಯನಿಧೀ ಅವರು ತಮ್ಮ ತಂದೆ ಸ್ಟಾಲಿನ್ ಮತ್ತು ಎಐಎಡಿಎಂಕೆ ನಾಯಕ ಓ. ಪನ್ನೀರಸೆಲ್ವಂ(OPS) ನಂತರ ರಾಜ್ಯದ ಮೂರನೇ ಉಪ ಮುಖ್ಯಮಂತ್ರಿಯಾಗಿದ್ದಾರೆ. ಅವರು ಈಗಾಗಲೇ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕಾರಣ ಇಂದಿನ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿಲ್ಲ.
ರಾಜಭವನ ಶನಿವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ಪ್ರಸ್ತುತ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಿರುವ ಉದಯನಿಧಿ ಅವರಿಗೆ ಯೋಜನೆ ಮತ್ತು ಅಭಿವೃದ್ಧಿಯ ಹೆಚ್ಚುವರಿ ಖಾತೆಯನ್ನು ಸಹ ನೀಡಲಾಗಿದೆ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಬಡ್ತಿ ನೀಡಲಾಗಿದೆ.
ಸಚಿವರಾಗಿ ಮರಳಿದ ಸೆಂಥಿಲ್ ಬಾಲಾಜಿ
ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡುವ ಮೊದಲು ಮನಿ ಲಾಂಡರಿಂಗ್ ಪ್ರಕರಣದಲ್ಲಿ 15 ತಿಂಗಳು ಜೈಲಿನಲ್ಲಿದ್ದ ಡಿಎಂಕೆ ನಾಯಕ ಬಾಲಾಜಿ ಅವರನ್ನು ಸಂಪುಟದಲ್ಲಿ ಮತ್ತೆ ಸಚಿವರನ್ನಾಗಿ ನೇಮಿಸಲಾಯಿತು.
ರಾಜ್ಯಪಾಲರು ಬಾಲಾಜಿಯನ್ನು ವಜಾಗೊಳಿಸಿದ್ದರು, ದೀರ್ಘಕಾಲ ಖಾತೆ ಇಲ್ಲದೆ ಸಚಿವರಾಗಿದ್ದ ಬಾಲಾಜಿ ಈ ವರ್ಷದ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದರು, ಅದನ್ನು ರಾಜ್ಯಪಾಲರು ಅಂಗೀಕರಿಸಿದರು.
ಸಚಿವ ಸಂಪುಟ ಪುನಾರಚನೆ
ಹಾಲು ಮತ್ತು ಡೈರಿ ಅಭಿವೃದ್ಧಿ ಖಾತೆಯನ್ನು ಹೊಂದಿದ್ದ ಟಿ. ಮನೋ ತಂಗರಾಜ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಗಿಂಗಿ ಎಸ್. ಮಸ್ತಾನ್ ಮತ್ತು ಕೆ. ರಾಮಚಂದ್ರನ್(ಪ್ರವಾಸೋದ್ಯಮ) ಅವರನ್ನು ಕೈಬಿಡುವ ಕುರಿತು ಸ್ಟಾಲಿನ್ ಅವರ ಶಿಫಾರಸುಗಳನ್ನು ಶನಿವಾರ ರಾಜ್ಯಪಾಲರು ಅನುಮೋದಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಕೆ. ಪೊನ್ಮುಡಿ ಈಗ ಅರಣ್ಯ ಸಚಿವರಾಗಿದ್ದಾರೆ. ಪರಿಸರ ಸಚಿವ ಶಿವ ವಿ. ಮೆಯ್ಯನಾಥನ್ ಹಿಂದುಳಿದ ವರ್ಗಗಳ ಸಚಿವರಾಗಿದ್ದರೆ, ಪ್ರಸ್ತುತ ಅರಣ್ಯ ಖಾತೆಯನ್ನು ಹೊಂದಿರುವ ಡಾ ಎಂ. ಮತಿವೆಂಥನ್ ಅವರಿಗೆ ಆದಿ ದ್ರಾವಿಡರ್ ಕಲ್ಯಾಣ ನೀಡಲಾಗಿದೆ. ಹಣಕಾಸು ಸಚಿವ ತಂಗಂ ತೆನ್ನರಸು ಅವರಿಗೆ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹೊಂದಿರುವ ಆರ್. ಎಸ್. ರಾಜಕಣ್ಣಪ್ಪನವರು ಹಾಲು ಮತ್ತು ಡೈರಿ ಅಭಿವೃದ್ಧಿ ಮತ್ತು ಖಾದಿ ಸಚಿವರಾಗಿದ್ದಾರೆ.