ನೂತನವಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಣ್ಣಾಮಲೈ ಮಾಧ್ಯಮಗಳ ವಿಚಾರವಾಗಿ ನೀಡಿರುವ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿಗೆ ಶೇರ್ ಮಾಡಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದರಲ್ಲಿ ಅಣ್ಣಾಮಲೈ ಇನ್ನೊಂದು ಆರು ತಿಂಗಳಲ್ಲಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸೋದಾಗಿ ಹೇಳಿಕೊಂಡಿದ್ದರು.
ಮುಂದಿನ ಆರು ತಿಂಗಳಲ್ಲಿ, ನಾವು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲಿದ್ದೇವೆ. ಮಾಧ್ಯಮವನ್ನ ನಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದೇವೆ. ಹೀಗಾಗಿ ಯಾರೂ ಚಿಂತಿಸುವ ಅಗತ್ಯವಿಲ್ಲ. ಯಾವುದೇ ಮಾಧ್ಯಮಗಳು ಸುಳ್ಳು ಸುದ್ದಿಯನ್ನ ಬಿತ್ತರಿಸಲು ಸಾಧ್ಯವಾಗೋದಿಲ್ಲ. ಬಿಜೆಪಿಯ ಮಾಜಿ ಅಧ್ಯಕ್ಷರು ಐಟಿ ಸಚಿವಾಲಯದಲ್ಲಿ ಮಂತ್ರಿಯಾಗಿದ್ದಾರೆ. ಹೀಗಾಗಿ ಎಲ್ಲಾ ಮಾಧ್ಯಮಗಳು ಅವರ ಸಚಿವಾಲಯದ ಅಡಿಯಲ್ಲೇ ಬರಲಿದೆ. ತಪ್ಪುಗಳು ನಿರಂತವಾಗಿ ಸಂಭವಿಸೋಕೆ ಸಾಧ್ಯವಿಲ್ಲ. ರಾಜಕೀಯದ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಎಲ್. ಮುರುಗನ್ ಕೇಂದ್ರ ಐಟಿ ಸಚಿವಾಲಯದಲ್ಲಿ ಸ್ಥಾನ ಪಡೆದಿದ್ದರ ಬಗ್ಗೆ ಉಲ್ಲೇಖಿಸುತ್ತಾ ಅಣ್ಣಾಮಲೈ ಈ ರೀತಿಯ ಪೋಸ್ಟ್ ಶೇರ್ ಮಾಡಿದ್ದಾರೆ.
ಕೊಯಂಬತ್ತೂರಿನಿಂದ ಚೆನ್ನೈಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಕೊರೊನಾದಿಂದಾಗಿ ಸಾರ್ವಜನಿಕ ಸಭೆಗಳಿಗೆ ತಡೆಯೊಡ್ಡುತ್ತಿರುವ ಅಧಿಕಾರಿಗಳಿಗೆ ಅಣ್ಣಾಮಲೈರ ಈ ನಡೆಯಿಂದಾಗಿ ಅಡಚಣೆ ಉಂಟಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಣ್ಣಾಮಲೈ ಮಾಧ್ಯಮಗಳು ಸುಳ್ಳು ಸುದ್ದಿಯನ್ನ ಹರಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರ ಬಳಿ, ಯಾರೂ ತಲೆಕೆಡಿಸಿಕೊಳ್ಳಬೇಡಿ. ಮುಂದಿನ ಆರು ತಿಂಗಳಲ್ಲಿ ಮಾಧ್ಯಮ ನಮ್ಮ ಹಿಡಿತದಲ್ಲಿ ಇರಲಿದೆ ಎಂದು ಹೇಳಿದ್ದಾರೆ. ಇದು ತಮಿಳುನಾಡಿನಲ್ಲಿ ಭಾರೀ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.
ಅಣ್ಣಾಮಲೈರ ಈ ಹೇಳಿಕೆಯನ್ನ ಖಂಡಿಸಿರುವ ರಾಜ್ಯ ಐಟಿ ಸಚಿವ ಮಾನೋ ತಂಗರಾಜ್, ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಆದರೆ ಅಣ್ಣಾಮಲೈ ಮಾಧ್ಯಮಗಳನ್ನ ಒಂದೇ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.