ಚೆನ್ನೈ: ತಮಿಳುನಾಡು ಸರ್ಕಾರ ಹೊಸೂರಿನಲ್ಲಿ 2,000 ಎಕರೆ ಪ್ರದೇಶದಲ್ಲಿ ವಾರ್ಷಿಕ 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದೆ.
ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೈಗಾರಿಕಾ ಅಗತ್ಯಗಳನ್ನು ಬೆಂಬಲಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರಸ್ತುತ, ತಮಿಳುನಾಡು ಮಧುರೈ, ಚೆನ್ನೈ, ಕೊಯಮತ್ತೂರು ಮತ್ತು ತಿರುಚ್ಚಿಯಲ್ಲಿ ನಾಲ್ಕು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಕಾಂಚೀಪುರಂ ಜಿಲ್ಲೆಯ ಪರಂದೂರ್‌ನಲ್ಲಿ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನ ವೇಗವಾಗಿ ಮುಂದುವರಿಯುತ್ತಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಇತ್ತೀಚೆಗಷ್ಟೇ ಚರ್ಚೆ ನಡೆದಿರುವ ಹೊತ್ತಲ್ಲಿ ತಮಿಳುನಾಡು ಸಿಎಂ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಘೋಷಿಸಿದ್ದಾರೆ.
ಹೊಸೂರು ಮಾತ್ರವಲ್ಲದೆ ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಚಾಲನೆ ನೀಡಲು ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಹೊಸೂರಿನಲ್ಲಿ 2,000 ಎಕರೆ ಪ್ರದೇಶದಲ್ಲಿ ವಾರ್ಷಿಕ 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗುವುದು ಎಂಬ ಸಿಎಂ ಘೋಷಣೆಗೆ ಸದನದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ಅನುಮೋದನೆ ದೊರೆಯಿತು.
ತಮಿಳುನಾಡು ಸರ್ಕಾರದ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಕೇಂದ್ರದ ಪ್ರಸ್ತುತ ನೀತಿ ಸಂಭಾವ್ಯ ಅಡ್ಡಿಯಾಗಿದೆ. ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ 150-ಕಿಮೀ ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣಗಳನ್ನು ಅನುಮತಿಸುವುದಿಲ್ಲ. ಹೊಸೂರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 74 ಕಿಮೀ ದೂರದಲ್ಲಿದೆ.