
ಚೆನ್ನೈ: ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ.
ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜುಲೈ 10(ಬುಧವಾರ) ರಂದು ನಿಗದಿಯಾಗಿದೆ. ಏಪ್ರಿಲ್‌ನಲ್ಲಿ ಡಿಎಂಕೆ ಶಾಸಕ ಪುಗಳೆಂದಿ ಅವರ ಅಕಾಲಿಕ ನಿಧನದಿಂದ ಇದು ತೆರವಾಗಿತ್ತು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಜುಲೈ 10 ರಂದು ನಡೆಯಲಿರುವ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಡಿಎಂಕೆ ಹಿಂಸಾಚಾರ, ಹಣಬಲದಲ್ಲಿ ಚುನಾವಣೆಗಳನ್ನು ನಡೆಸುತ್ತದೆ. ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆಸಲಾಗುವುದಿಲ್ಲ. ಜನರಿಗೆ ಮತ ಚಲಾಯಿಸಲು ಸ್ವಾತಂತ್ರ್ಯ ನೀಡುವುದಿಲ್ಲ. ಆದ್ದರಿಂದ ಎಐಎಡಿಎಂಕೆ ಈ ಚುನಾವಣೆಯನ್ನು ಬಹಿಷ್ಕರಿಸುತ್ತಿದೆ ಎಂದು ಹೇಳಿದ್ದಾರೆ.