ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮದುವೆಯಲ್ಲಿ ಪಾಲ್ಗೊಳ್ಳಲು ಕನ್ಯಾಕುಮಾರಿಗೆ ತೆರಳಿದ್ದ ಅವರು ಖಾಸಗಿ ಬೀಚ್‌ನಲ್ಲಿ ಈಜಲು ಹೋಗಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ತೆಂಗಿನ ತೋಟದ ಮೂಲಕ ಮುಚ್ಚಿದ ಲೆಮೂರ್ ಬೀಚ್‌ಗೆ ಪ್ರವೇಶಿಸಿದ್ದರು ಎಂದು ಕನ್ಯಾಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇ ಸುಂದರವತನಂ ಹೇಳಿದ್ದಾರೆ.
ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಬೀಚ್ ಅನ್ನು ಮುಚ್ಚಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಿರುಚಿರಾಪಳ್ಳಿಯ ಜನಪ್ರಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ಮದುವೆಯಲ್ಲಿ ಪಾಲ್ಗೊಳ್ಳಲು ಕನ್ಯಾಕುಮಾರಿಗೆ ಬಂದಿದ್ದರು. ಮೃತರನ್ನು ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್, ತಂಜಾವೂರಿನ ಚಾರುಕವಿ, ನೇವೇಲಿಯ ಗಾಯತ್ರಿ ಮತ್ತು ಆಂಧ್ರಪ್ರದೇಶದ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದ್ದು, ಅವರನ್ನು ಆಸರಿಪಳ್ಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.