ತಮಿಳುನಾಡು(ತಿರುನೆಲ್ವೇಲಿ): ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜೂನ್ 4 ರಂದು ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿರಿಪ್ಪು ಎಂಬಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಲೆಬ್ಬಾಯಿ ಕುಡಿಯಿರಿಪ್ಪುವಿನ ಕೀಲತೇರುವಿನ ದಿನಗೂಲಿ ಕಾರ್ಮಿಕ ನಾಗರಾಜ್ ಅವರ ಮಕ್ಕಳಾದ ನಿತೀಶಾ(7), ನಿತೀಶ್ (5) ಮತ್ತು ಕೂಲಿ ಕಾರ್ಮಿಕ ಸುಧನ್ ಅವರ ಮಗ ಕಬಿಶಾಂತ್(4) ಮೃತಪಟ್ಟವರು.
ನಾಗರಾಜ್ ಅವರ ಸಹೋದರ ಮಣಿಕಂದನ್ ಅವರಿಗೆ ಸೇರಿದ ಕಾರ್ ಇದಾಗಿದ್ದು, ಕೆಲವು ದಿನಗಳ ಹಿಂದೆ ಮನೆ ಬಳಿ ಕಾರ್ ನಿಲ್ಲಿಸಲಾಗಿತ್ತು. ಶನಿವಾರ ಮಧ್ಯಾಹ್ನ ಊಟದ ನಂತರ ಮೂವರು ಮಕ್ಕಳು ಆಟವಾಡಲು ಮನೆಯಿಂದ ಹೊರಗೆ ಹೋಗಿ ಕಾರ್ ಹತ್ತಿಕೊಂಡಿದ್ದರು. ಮಕ್ಕಳು ನಾಪತ್ತೆಯಾಗಿರುವುದನ್ನು ಕಂಡು ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಕಾರ್ ಬಳಿ ಮಕ್ಕಳು ಆಟವಾಡುತ್ತಿದ್ದುದನ್ನು ಕಂಡ ದಾರಿಹೋಕರೊಬ್ಬರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಕಾರ್ ಒಳಗೆ ಮೂವರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಪೋಷಕರು ಪತ್ತೆ ಮಾಡಿದ್ದಾರೆ. ದಾರಿಹೋಕರ ಸಹಾಯದಿಂದ, ಅವರು ಕಾರಿನ ಬಾಗಿಲು ಮುರಿದು ಮಕ್ಕಳನ್ನು ಪನಗುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದರು.
ತಿರುನಲ್ವೇಲಿ(ಗ್ರಾಮಾಂತರ) ಎಸ್ಪಿ ಪಿ. ಸರವಣನ್ ಮಾತನಾಡಿ, ಮೂರು ದಿನಗಳಿಂದ ಕಾರ್ ಅಲ್ಲೇ ನಿಲ್ಲಿಸಲಾಗಿದೆ. ಆಮ್ಲಜನಕ ಕೊರತೆಯಿಂದಾಗಿ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಪಣಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.