ಚೆನ್ನೈ: ಹದಿನೇಳರ ಹರೆಯದ ಬಾಲಕಿಯು ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮನೀಡಲು ಕಾರಣನಾದ ಆರೋಪದಲ್ಲಿ 12 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಘಟನೆ ತಂಜಾವೂರಿನಲ್ಲಿ ನಡೆದಿದೆ.
ಬಾಲಕಿ ಹೊಟ್ಟೆ ನೋವಿನಿಂದ ನರಳುತ್ತಿದ್ದ ಕಾರಣ ಪೋಷಕರು ಆಕೆಯನ್ನು ತಂಜಾವೂರು ಜಿಲ್ಲೆಯ ರಾಜಾ ಮಿರಾಸುದಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆಯ ವೇಳೆ ಆಕೆ 9 ತಿಂಗಳ ತುಂಬು ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಅದೇ ದಿನ ಆಕೆ ಹೆಣ್ಣುಮಗುವಿಗೆ ಜನ್ಮವನ್ನಿತ್ತಿದ್ದಾಳೆ.
ಕ್ಷಣವೇ ತಂಜಾವೂರಿನ ಮಹಿಳಾ ಠಾಣೆಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಈ ಘಟನೆಗೆ ಕಾರಣನಾದ ಆರೋಪದಲ್ಲಿ 12 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆಯ ಎರಡು ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆತನನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಲಾಗಿದೆ.
ಬಾಲಕನಲ್ಲದೆ ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೋ ಎಂಬ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, 9 ತಿಂಗಳ ಗರ್ಭಿಣಿಯಾಗುವ ತನಕ ಕುಟುಂಬಕ್ಕೆ ಇದು ಗೊತ್ತಾಗಲಿಲ್ಲವೇ ಎಂಬ ಕುರಿತೂ ವಿಚಾರಣೆ ನಡೆಸುತ್ತಿದ್ದಾರೆ.