
ಉಡುಪಿ: ಸದ್ಯಕ್ಕೆ ತಾಲೂಕು ಪಂಚಾಯಿತಿ ರದ್ದು ಮಾಡುವುದಿಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಮೂಲಕ ಮೂರು ಸ್ತರದ ಪಂಚಾಯಿತಿ ವ್ಯವಸ್ಥೆ ಬದಲಿಗೆ ಎರಡು ಸ್ತರದ ಪಂಚಾಯಿತಿ ಉಳಿಸಿಕೊಂಡು ತಾಲೂಕು ಪಂಚಾಯಿತಿಯನ್ನು ರದ್ದುಪಡಿಸಬಹುದು ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಾಲೂಕು ಪಂಚಾಯಿತಿಯನ್ನು ರದ್ದುಪಡಿಸಬಹುದು ಎಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿತ್ತು. ವಿಧಾನಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಬೇಕಿದೆ. ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಚರ್ಚಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ನಂತರದಲ್ಲಿ ತಾಲೂಕು ಪಂಚಾಯಿತಿ ರದ್ದಾಗಬಹುದು. ಆದರೆ, ಸದ್ಯಕ್ಕೆ ತಾಲೂಕು ಪಂಚಾಯಿತಿ ರದ್ದಾಗುವುದಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿ ರದ್ದು ಮಾಡಲಾಗುವುದು ಎಂದು ಹೇಳಲಾಗಿತ್ತು. ಸಚಿವರು ಊಹಾಪೋಹಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.