ಲಾಟರಿ ಅನ್ನೋದು ಸಂಪೂರ್ಣ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಆಟವಾಗಿದೆ. ಇದರಲ್ಲಿ ಒಮ್ಮೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂದರೆ ಸಾಕು ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಪಧಿಗಳೇ ಆಗಿಬಿಡುತ್ತೇವೆ.
ಲಾಟರಿ ಖುಲಾಯಿಸೋದೇ ಅಪರೂಪ. ಅಂತಂದ್ರಲ್ಲಿ ಅಮೆರಿಕದ ವರ್ಜಿನಿಯಾ ಎಂಬಲ್ಲಿ ವ್ಯಕ್ತಿಯೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ 20 ಬಾರಿಗೆ ತಾನು ಅದೃಷ್ಟವಂತ ಅನ್ನೋದನ್ನ ಸಾಬೀತು ಪಡಿಸಿದ್ದಾನೆ.
ಅಲೆಕ್ಸಾಂಡ್ರಿಯಾದ ವಿಲಿಯಂ ನೆವೆಲ್ ಎಂಬವರು 20 ಲಾಟರಿ ಟಿಕೆಟ್ಗಳನ್ನು ಖರೀದಿ ಮಾಡಿದ್ದರು. ಅದೃಷ್ಟ ಅಂದರೆ ಆ 20 ಟಿಕೆಟ್ಗಳೂ ಲಾಟರಿ ಹೊಡೆದಿದ್ದು ವಿಲಿಯಂ ಒಂದೇ ಬಾರಿ 74 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದರು.
5-4-1-1 ಸಂಖ್ಯೆಯ ಲಾಟರಿ ಟಿಕೆಟ್ಗಳನ್ನು ವಿಲಿಯಂ ಖರೀದಿಸಿದ್ದರು. ಎಲ್ಲದರ ಕಾಂಬಿನೇಷನ್ ಒಂದೇ ಆಗಿತ್ತು. ಪರಿಣಾಮ ಪ್ರತಿ ಲಾಟರಿಯಿಂದ 5 ಸಾವಿರ ಡಾಲರ್ ಗೆದ್ದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ತರ ಕೆರೊಲಿನಾದಲ್ಲಿಯೂ ಇಂತಹದ್ದೇ ಮಾದರಿಯ ಘಟನೆಯೊಂದು ನಡೆದಿತ್ತು. ದಂಪತಿಯು ಆರು ಅಂಕಿಗಳ ಚೆಕ್ ಖರೀದಿಸುವ ಮೂಲಕ ಜಾಕ್ಪಾಟ್ ಹೊಡೆದಿದ್ದರು. ಪತಿಯು ಒಂದೇ ಸಂಖ್ಯೆಯ 2 ಟಿಕೆಟ್ಗಳನ್ನು ಖರೀದಿಸಿದ್ದರು. ಅದೃಷ್ಟ ಅಂದರೆ ಎರಡೂ ಟಿಕೆಟ್ಗಳಿಂದಲೂ ಅವರಿಗೆ ಲಾಟರಿ ಹೊಡೆದಿದೆ.
ಇದೀಗ ಇಂತಹುದೇ ಘಟನೆಯು ಉತ್ತರ ಕೆರೊಲಿನಾದ 49 ವರ್ಷದ ವ್ಯಕ್ತಿಯ ಜೀವನದಲ್ಲಿಯೂ ಸಂಭವಿಸಿದೆ. ಇಲ್ಲಿ ವಿಚಿತ್ರ ಅಂದರೆ ಈ ವ್ಯಕ್ತಿ ಮಾತ್ರ ಯಾವುದೇ ಪ್ಲಾನ್ ಮಾಡದೇ ಟಿಕೆಟ್ ಖರೀದಿ ಮಾಡಿದ್ದರು.
ಸ್ಕಾಟಿ ಥಾಮಸ್ ಎಂಬವರು ಯಾವುದೇ ಉದ್ದೇಶವಿಲ್ಲದೇ ಒಂದೇ ಮಾದರಿಯ 2 ಟಿಕೆಟ್ಗಳನ್ನು ಖರೀದಿಸಿದ್ದರು. ಕೊನೆಯಲ್ಲಿ ಈ ಎರಡೂ ಟಿಕೆಟ್ಗಳು ಜಾಕ್ಪಾಟ್ ನೀಡಿವೆ.
2 ಡಾಲರ್ ಮೌಲ್ಯದ ಎರಡು ಟಿಕೆಟ್ಗಳಿಗೆ ಥಾಮಸ್ ಪ್ರತಿ ಟಿಕೆಟ್ನಿಂದ ಬರೋಬ್ಬರಿ 25 ಸಾವಿರ ಡಾಲರ್ ಲಾಟರಿ ಹಣ ಸಂಪಾದಿಸಿದ್ದಾರೆ. ಈ ಹಣದಿಂದ ಉದ್ಯಮ ಆರಂಭಿಸುತ್ತೇನೆ ಹಾಗೂ ಮನೆಯೊಂದನ್ನು ನಿರ್ಮಿಸುತ್ತೇನೆ ಎಂದು ಥಾಮಸ್ ಹೇಳಿದ್ದಾರೆ.