ಆಲ್ ಅಫ್ಘನ್ ರೋಬೋಟಿಕ್ಸ್ ತಂಡದ ಐವರು ಸದಸ್ಯರು ಮಂಗಳವಾರ ಮೆಕ್ಸಿಕೋಗೆ ಆಗಮಿಸಿದ್ದಾರೆ. ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳ ಸರ್ವಾಧಿಕಾರ ಆರಂಭವಾದ ಬಳಿಕ ದೇಶದಿಂದ ಪಲಾಯನ ಮಾಡಿದ್ದ ಅಫ್ಘನ್ ರೊಬೋಟಿಕ್ಸ್ ತಂಡದ ಸದಸ್ಯೆಯರಿಗೆ ಮೆಕ್ಸಿಕೋ ಸ್ವಾಗತ ನೀಡುತ್ತಿದೆ ಎಂದು ಮೆಕ್ಸಿಕೋ ವಿದೇಶಾಂಗ ವ್ಯವಹಾರ ಸಚಿವಾಲಯದ ಬಹುಪಕ್ಷೀಯ ಹಾಗೂ ಮಾನವ ಹಕ್ಕುಗಳ ಉಪಕಾರ್ಯದರ್ಶಿ ಮಾರ್ಥಾ ಡೆಲ್ಗಾಡೋ ಹೇಳಿದ್ದಾರೆ.
ಅಮೆರಿಕ ಬೆಂಬಲಿತ ಸರ್ಕಾರವನ್ನು ಪತನಗೊಳಿಸಿದ ತಾಲಿಬಾನ್ ಉಗ್ರರು ಅಪ್ಘನ್ನಲ್ಲಿ ತಮ್ಮ ಪಾರುಪತ್ಯ ಸಾಧಿಸಿದ್ದಾರೆ. ಈಗಾಗಲೇ ಅಮೆರಿಕ, ಭಾರತ ಹಾಗೂ ರಷ್ಯಾದಂತಹ ರಾಷ್ಟ್ರಗಳು ವಿಮಾನಯಾನದ ಮೂಲಕ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನದಲ್ಲಿವೆ. ಅಲ್ಲದೇ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯನ್ನು ಸ್ಥಳಾಂತರ ಮಾಡಲು ತಾಲಿಬಾನಿಗಳು ಆಗಸ್ಟ್ 31ರವೆಗೆ ಗಡುವು ನೀಡಿದ್ದಾರೆ.
14 ವರ್ಷದೊಳಗಿನ ಹುಡುಗಿಯರು ಹಾಗೂ ಮಹಿಳೆಯರನ್ನೊಳಗೊಂಡ ಈ ತಂಡವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕಡಿಮೆ ವೆಚ್ಚದ ವೆಂಟಿಲೇಟರ್ ತಯಾರಿಕೆಗೆ ಈ ತಂಡ ಮುಂದಾಗಿತ್ತು.