
ಕಳ್ಳತನ, ಸಲಿಂಗಕಾಮ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದವರಿಗೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಸಾರ್ವಜನಿಕರ ಸಮ್ಮುಖದಲ್ಲಿಯೇ ಬಹಿರಂಗ ಶಿಕ್ಷೆ ನೀಡಿದೆ. ಸಹಸ್ರಾರು ಜನರು ನೆರೆದಿದ್ದ ಕ್ರೀಡಾಂಗಣದಲ್ಲಿ 9 ಮಂದಿ ಅಪರಾಧಿಗಳಿಗೆ ಛಡಿಯೇಟು ನೀಡಲಾಗಿದೆ.
ಈ ಅಪರಾಧಿಗಳಿಗೆ ಸಾರ್ವಜನಿಕ ಶಿಕ್ಷೆ ನೀಡುವ ಸಂದರ್ಭದಲ್ಲಿ ಕಂದಹಾರ್ ನಿವಾಸಿಗಳು ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಅಪರಾಧಿಗಳಿಗೆ 35 ರಿಂದ 39 ಛಡಿ ಏಟು ನೀಡಲಾಗಿದೆ ಎಂದು ಕಂದಹಾರ್ ಪ್ರಾಂತ್ಯ ಸರ್ಕಾರದ ವಕ್ತಾರ ಹಾಜಿ ಝೈದ್ ತಿಳಿಸಿದ್ದಾರೆ.
2021ರ ಆಗಸ್ಟ್ ನಲ್ಲಿ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ತಾಲಿಬಾನಿಗಳು ಡಿಸೆಂಬರ್ 7, 2022 ರಲ್ಲಿ ಅಪರಾಧಿಯೊಬ್ಬನಿಗೆ ಸಾರ್ವಜನಿಕವಾಗಿಯೇ ಗಲ್ಲಿಗೇರಿಸಿದ್ದರು. ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ಶಿಕ್ಷೆ ಪರಿಪಾಠ ಮತ್ತೆ ಆರಂಭವಾಗಿರುವುದಕ್ಕೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.