ನಾಗಪುರ್: ಚೀನಾ, ಪಾಕಿಸ್ತಾನ ಎರಡು ಕೂಡ ತಾಲಿಬಾನ್ ಜೊತೆಗೆ ಇವೆ ಎಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರ ಆರ್.ಎಸ್.ಎಸ್. ಕಚೇರಿಯಲ್ಲಿ ವಿಜಯದಶಮಿ ಪ್ರಯುಕ್ತ ಭಾಷಣ ಮಾಡಿದ ಅವರು, ತಾಲಿಬಾನ್ ಬದಲಾಗಬಹುದು, ಆದರೆ, ಪಾಕಿಸ್ತಾನ ಬದಲಾಗುವುದಿಲ್ಲ. ತಾಲಿಬಾನ್ ಚರಿತ್ರೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಂದು ಸಮಾಜದಲ್ಲಿ ದೇವಸ್ಥಾನಗಳ ಸ್ಥಿತಿ ಚೆನ್ನಾಗಿಲ್ಲ. ದಕ್ಷಿಣ ಭಾರತದಲ್ಲಿ ಅನೇಕ ದೇಗುಲಗಳು ಸರ್ಕಾರದ ಅಧೀನದಲ್ಲಿವೆ. ಕೆಲವು ದೇವಾಲಯ ಭಕ್ತರ ಅಧೀನದಲ್ಲಿವೆ. ಕೆಲವೆಡೆ ದೇವಾಲಯಗಳ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಕೆಲವು ವರ್ಷ ಮಾತ್ರ ದೇಗುಲವನ್ನು ಸ್ವಾಧೀನಕ್ಕೆ ಪಡೆಯಬಹುದು, ಬಳಿಕ ಸರ್ಕಾರ ವಾಪಸ್ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ ಎಂದರು.
ಕಾಶ್ಮೀರದಲ್ಲಿ ಉಗ್ರರು ಟಾರ್ಗೆಟ್ ಹತ್ಯೆಗಳನ್ನು ಮಾಡುತ್ತಿದ್ದಾರೆ. ಜನರನ್ನು ಹೆದುರಿಸಲು ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. 370 ನೇ ವಿಧಿ ರದ್ದಾದ ಬಳಿಕ ಸಾಮಾನ್ಯರಿಗೆ ಅನುಕೂಲವಾಗುತ್ತಿದೆ. ಕಾಶ್ಮೀರದ ಜನರ ಮನಸ್ಸನ್ನು ಭಾರತದ ಜೊತೆ ಜೋಡಿಸಬೇಕು. ನಾವು ದುರ್ಬಲವಾದಾಗ ಬೇರೆಯವರಿಗೆ ಹೆದರಬೇಕಾಗುತ್ತದೆ. ನಾವು ಸದೃಢವಾಗಬೇಕು. ನಮ್ಮ ಸಾಮರ್ಥ್ಯವನ್ನು ದುರ್ಬಲರ ರಕ್ಷಣೆಗೆ ಬಳಸಬೇಕು. ಹಿಂದೂ ಸಮಾಜವನ್ನು ಸದೃಢಗೊಳಿಸಬೇಕು. ನಮ್ಮ ಜೊತೆಗೆ ಮುಸ್ಲಿಮರು ಕೂಡ ಇರಬೇಕು ಎಂದು ಹೇಳಿದ್ದಾರೆ.