ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಬಳಿಕ ದಿನಕ್ಕೊಂದು ಕಾನೂನು ಜಾರಿಗೆ ಬರುತ್ತಲೇ ಇದೆ. ಈಗಾಗಲೇ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಯಬೇಕು ಅಥವಾ ಅವರ ಮಧ್ಯೆ ಪರದೆ ಹಾಕಬೇಕು ಎಂಬ ಆದೇಶ ಜಾರಿಗೆ ತಂದ ಬೆನ್ನಲ್ಲೇ ಇದೀಗ ಕ್ರೀಡಾ ಲೋಕದಿಂದಲೂ ಮಹಿಳೆಯರನ್ನು ದೂರವಿಡಲು ತಾಲಿಬಾನ್ ಮುಂದಾಗಿದೆ.
ಕ್ರೀಡೆಗಳಿಂದ ಅದರಲ್ಲೂ ವಿಶೇಷವಾಗಿ ಕ್ರಿಕೆಟ್ನಂತಹ ಕ್ರೀಡೆಗಳಿಗೆ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ ಎಂದು ತಾಲಿಬಾನ್ ವಕ್ತಾರ ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ನಲ್ಲಿ, ಮುಖ ಹಾಗೂ ದೇಹವನ್ನು ಮುಚ್ಚಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಬರಬಹುದು. ಇಸ್ಲಾಂ ಧರ್ಮವು ಮಹಿಳೆಯರನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆ.
ಇದು ಮಾಧ್ಯಮ ಯುಗ, ಪೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇಸ್ಲಾಂ ಹಾಗೂ ಇಸ್ಲಾಂ ಪ್ರಾಂತ್ಯವು ಮಹಿಳೆಯರಿಗೆ ಕ್ರಿಕೆಟ್ ಹಾಗೂ ದೇಹ ಪ್ರದರ್ಶಿಸುವಂತಹ ಕ್ರೀಡೆಗಳಿಂದ ದೂರವಿಡಲಿದೆ ಎಂದು ವಾಸಿಕ್ ಹೇಳಿದ್ದಾರೆ.