ಕಾಬೂಲ್: ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಮೈಗಂಟಿದ ಬಿಗಿಯಾದ ಬಟ್ಟೆ ಧರಿಸಿದ ಯುವತಿಯನ್ನು ಹತ್ಯೆಮಾಡಿದ್ದಾರೆ.
ತಾಲಿಬಾನ್ ಉಗ್ರರ ವಶದಲ್ಲಿರುವ ಸಮಾರ್ ನಲ್ಲಿ ಘಟನೆ ನಡೆದಿದೆ. ಮಿಜಾರ್ ಇ ಷರೀಫ್ ಗೆ ತೆರಳಲು ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ಕಾಯುತ್ತಿದ್ದ ಯುವತಿ ಹತ್ಯೆ ಮಾಡಲಾಗಿದೆ 21 ವರ್ಷದ ನಜನೀಸ್ ಎಂಬ ಯುವತಿ ಹತ್ಯೆಗೀಡಾದವಳು. ಬಲ್ಕಾ ಪ್ರಾಂತ್ಯದ ಸಮಾರ್ ಖಾಂಡಿಯಾನ್ ಗ್ರಾಮದಲ್ಲಿ ನಿಂತಿದ್ದ ವೇಳೆ ಉಗ್ರರು ಆಕೆಯನ್ನು ತಡೆದು ಬಿಗಿಯಾದ ಉಡುಪು ಧರಿಸಿದ್ದಕ್ಕೆ ಮತ್ತು ಗಂಡಸಿನ ರಕ್ಷಣೆ ಇಲ್ಲದೆ ಒಬ್ಬಳೇ ತೆರಳುತ್ತಿದ್ದ ಕಾರಣಕ್ಕೆ ಹತ್ಯೆಮಾಡಿದ್ದಾರೆ.
ತಾಲಿಬಾನ್ ಉಗ್ರರ ಪ್ರಕಾರ, ಮಹಿಳೆಯರು ಒಬ್ಬರೇ ತಿರುಗಾಡುವಂತಿಲ್ಲ. ಬಿಗಿಯಾದ ಬಟ್ಟೆ ಧರಿಸುವಂತಿಲ್ಲ. ಈ ಕಾರಣದಿಂದ ಯುವತಿಯನ್ನು ಹತ್ಯೆ ಮಾಡಲಾಗಿದೆ. ಅಮೆರಿಕ ಪಡೆಗಳು ವಾಪಸಾದ ನಂತರ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿಮೀರಿದೆ. ಅನೇಕ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆದುಕೊಂಡ ತಾಲಿಬಾನಿಗಳು ದಾಳಿ, ಹತ್ಯೆ, ವಿಕೃತ ಕಾನೂನು ಜಾರಿಯಂತಹ ಕೃತ್ಯದಲ್ಲಿ ತೊಡಗಿದ್ದಾರೆ.