ಕಾಬೂಲ್: ಮೊದಲ ಫತ್ವಾದಲ್ಲೇ ತಾಲಿಬಾನ್ ಉಗ್ರರು ತಮ್ಮ ಬುದ್ಧಿ ತೋರಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕೋ ಎಜುಕೇಷನ್ -ಸಹಶಿಕ್ಷಣಕ್ಕೆ ನಿಷೇಧ ಹೇರಿದ್ದಾರೆ.
ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿಕೊಂಡಿದ್ದ ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಮೊದಲ ಫತ್ವಾ ಹೊರಡಿಸಿದ್ದು ಅದರಲ್ಲಿ ಹೆರಾತ್ ಪ್ರಾಂತ್ಯದ ಖಾಸಗಿ-ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಕಲಿಯುವ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
ಸಮಾಜದ ಅನಿಷ್ಟಗಳಿಗೆ ಸಹ ಶಿಕ್ಷಣವೇ ಮೂಲ ಎಂದು ಹೇಳಿರುವ ತಾಲಿಬಾನಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು, ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಜೊತೆಗೆ ಚರ್ಚೆ ನಡೆಸಿ ವಿಶ್ವವಿದ್ಯಾಲಯಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಕಲಿಯುವ ವ್ಯವಸ್ಥೆಯನ್ನು ನಿಷೇಧಿಸಿರುವುದಾಗಿ ಹೇಳಲಾಗಿದೆ.
ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳುತ್ತಲೇ ಸಹ ಶಿಕ್ಷಣಕ್ಕೆ ನಿಷೇಧ ಹೇರಲಾಗಿದೆ. ಮಹಿಳಾ ಶಿಕ್ಷಕರು ಮತ್ತು ಉಪನ್ಯಾಸಕಿಯರು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಕಲಿಸಬೇಕು. ಗಂಡು ಮಕ್ಕಳಿಗೆ ಕಲಿಸಲು ಅವಕಾಶ ಇರುವುದಿಲ್ಲವೆನ್ನಲಾಗಿದೆ.