ಕಾಬೂಲ್ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸಲು ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿರ್ಬಂದ ಹೇರಿದೆ. ಪುರುಷರಿಗೆ ಮಾತ್ರ ಈ ಕಟ್ಟಡದ ಒಳಗೆ ಪ್ರವೇಶ ಇದೆ ಎಂದು ಸಚಿವಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಸಚಿವಾಲಯದ ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ತಾಲಿಬಾನ್ನ ಈ ನಿರ್ಧಾರವನ್ನು ಖಂಡಿಸಿರುವ ಮಹಿಳೆಯರು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಮೇಲೆ ತನ್ನ ಹಿಡಿತವನ್ನು ಸಾಧಿಸಿದಾಗಿನಿಂದ ತಾಲಿಬಾನ್ ಮಹಿಳೆಯರ ಮೇಲೆ ಒಂದಿಲ್ಲೊಂದು ನಿರ್ಬಂಧಗಳನ್ನು ಹೇರುತ್ತಲೇ ಬರ್ತಿದೆ. ಇದೇ ರೀತಿ ಮುಂದುವರಿದರೆ ಅಫ್ಘಾನಿಸ್ತಾನದ ಮಹಿಳೆಯರು ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಬರಲು ಇನ್ನು ಹೆಚ್ಚು ದಿನ ಬಾಕಿ ಉಳಿದಿಲ್ಲ ಎನಿಸುತ್ತಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಇಸ್ಲಾಂ ತತ್ವಗಳ ಆಧಾರದ ಮೇಲೆ ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ನೀಡುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಈ ಹೇಳಿಕೆಯ ವಿರುದ್ಧ ತಾಲಿಬಾನ್ ನಡೆದುಕೊಂಡಿದ್ದು ಮಹಿಳೆಯರಿಗೆ ಎಲ್ಲಾ ವಿಭಾಗಗಳಿಂದಲೂ ನಿರ್ಬಂಧ ಹೇರುತ್ತಿದೆ.