ಕಾಬೂಲ್ : ಅಫ್ಘಾನಿಸ್ತಾನವು ತಾಲಿಬಾನ್ ವಶವಾಗಿರುವುದರಿಂದಾಗಿ ಅಲ್ಲಿನ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗ ಅಲ್ಲಿನ ಜನರು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದಾರೆ.
ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳಲ್ಲಿ ಹಿಮ ಹಾಗೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಪತ್ತು ನಿರ್ವಹಣಾ ಸಚಿವಾಲಯದ ಅಧಿಕಾರಿ ಫ್ರೀ ಆಫ್ ಅಫ್ಘಾನಿಸ್ತಾನ್ ರೇಡಿಯೊಂದಿಗೆ ಮಾತನಾಡಿದ್ದು, ಪ್ರತಿಕೂಲ ಹವಾಮಾನ ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೇ, ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಅಗತ್ಯ ದಿನಬಳಕೆಯ ವಸ್ತುಗಳನ್ನು ಸಾಗಿಸಲಾಗುತ್ತಿದೆ. ಪ್ರತಿಕೂಲ ವಾತಾವರಣವಿರುವ ಜನರಿಗೆ ಧೈರ್ಯ ತುಂಬಬೇಕು. ಅವರಿಗೆ ಅಗತ್ಯ ವಸ್ತುಗಳು ಸಿಗುವಂತೆ ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಅಲ್ಲಿನ ಖಾಮಾ ಪ್ರೆಸ್ ವರದಿ ಮಾಡಿದೆ.
ಸದ್ಯ ಅಲ್ಲಿನ 32 ಪ್ರಾಂತ್ಯಗಳಲ್ಲಿ ಭಾರೀ ಹಿಮದ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಅಲ್ಲದೇ, ಈ ಪ್ರದೇಶಗಳಲ್ಲಿ ಪ್ರವಾಹ ಕೂಡ ಸೃಷ್ಟಿಯಾಗುತ್ತಿದೆ. ಈಗಾಗಲೇ ಹಿಮದ ಮಳೆಗೆ ಸಿಲುಕಿ 26 ಜನ ಗಾಯಗೊಂಡು, 7 ಜನ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದ ಅಲ್ಲಿ ಹಿಮದ ಮಳೆ ಸುರಿಯುತ್ತಿದೆ ಎಂದು ತಿಳಿದು ಬಂದಿದೆ.