ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಜನರು ಆಹಾರದ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ಪೌಷ್ಠಿಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಅಗತ್ಯ ಪೋಷಕಾಂಶ ಜೊತೆ ಸೂರ್ಯನ ಬೆಳಕಿನಿಂದ ಸಿಗುವ ವಿಟಮಿನ್ ಡಿ ಕೂಡ ಬಹಳ ಮುಖ್ಯವಾಗಿದ್ದು. ವಿಟಮಿನ್ ಡಿ, ಮೂಳೆಗಳು, ಸ್ನಾಯುಗಳು ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡಲು,ಬಲಪಡಿಸಲು ನೆರವಾಗುತ್ತದೆ.
ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ, ವಿಟಮಿನ್ ಡಿ ಕೊರೊನಾ ಗಂಭೀರ ಸೋಂಕಿನಿಂದ ದೇಹವನ್ನು ರಕ್ಷಿಸುತ್ತದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ವಿಟಮಿನ್ ಡಿ ಪಾತ್ರ ಬಹಳ ಮುಖ್ಯ. ಅಧ್ಯಯನದ ಪ್ರಕಾರ, ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಇದ್ದಲ್ಲಿ, ಸೋಂಕು ಗಂಭೀರವಾಗುವುದನ್ನು ತಡೆಯಬಹುದು. ಸಾವಿನ ಅಪಾಯ ಕೂಡ ಕಡಿಮೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.
ಐರ್ಲೆಂಡ್‌ನ ಟ್ರಿನಿಟಿ ಕಾಲೇಜು, ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಚೀನಾದ ಜೆಜಿಯಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಅನೇಕ ವಿಭಾಗದಲ್ಲಿ ಸಂಶೋಧನೆ ನಡೆದಿದೆ. ಕೊರೊನಾ ಸೋಂಕು ತಡೆಯಲು ವಿಟಮಿನ್ ಡಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಇದ್ರಿಂದ ಗೊತ್ತಾಗಿದೆ. ಸೂರ್ಯನ ಬೆಳಕಿಗೆ ದೇಹ ಒಡ್ಡಿಕೊಂಡಾಗ, ದೇಹವು ತನ್ನದೇ ಆದ ವಿಟಮಿನ್ ಡಿ ತಯಾರಿಸಲು ಪ್ರಾರಂಭಿಸುತ್ತದೆ. ಸೂರ್ಯನ ಕಿರಣದಲ್ಲಿ ಅತಿ ಹೆಚ್ಚು ವಿಟಮಿನ್ ಡಿ ಸಿಗುತ್ತದೆ. ಇದನ್ನು ಹೊರತುಪಡಿಸಿ, ಸಾಲ್ಮನ್, ಲಿವರ್ ಆಯಿಲ್, ಮೊಟ್ಟೆಯ ಹಳದಿ ಭಾಗ ಮಶ್ರೂಮ್, ಹಸುವಿನ ಹಾಲು, ಸೋಯಾಬೀನ್ ಹಾಲು, ಕಿತ್ತಳೆ ರಸ, ಓಟ್ ಮೀಲ್ ಇತ್ಯಾದಿಗಳಲ್ಲಿಯೂ ವಿಟಮಿನ್ ಡಿ ಸಿಗುತ್ತದೆ.