ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯನ್ನ ಕರೆಸಿದ ಪಂಚಾಯ್ತಿ ಪದಾಧಿಕಾರಿಗಳು 50 ಸಾವಿರ ತೆಗೆದುಕೊಂಡು ಆರೋಪಿಗೆ 5 ಬಾರಿ ಚಪ್ಪಲಿಯಿಂದ ಹೊಡಿ ಎಂಬ ವಿಚಿತ್ರ ತೀರ್ಪನ್ನ ನೀಡಿದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪಂಚಾಯ್ತಿಯ ಈ ವಿಚಿತ್ರ ತೀರ್ಪನ್ನ ಒಪ್ಪಿಕೊಳ್ಳದ ಸಂತ್ರಸ್ತೆ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕೊಥಿಬಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾರಾಜಗಂಜ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಸ್ಥರು ಪಂಚಾಯ್ತಿ ಬಳಿ ಹೋಗಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು.
ಜೂನ್ 23ರ ಸಂಜೆ 13 ವರ್ಷದ ಬಾಲಕಿ ತರಕಾರಿ ಕೊಯ್ಯಲು ಜಮೀನಿಗೆ ತೆರಳಿದ್ದ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಮನೆಗೆ ಬಂದ ಬಾಲಕಿ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಕೂಡಲೇ ಅತ್ಯಾಚಾರ ಆರೋಪಿಯ ಮನೆಗೆ ತೆರಳಿದ ಬಾಲಕಿ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಾ ಕಣ್ಣೀರಿಟ್ಟಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ ಅತ್ಯಾಚಾರಿ ಕುಟುಂಬಸ್ಥರು ಸಂತ್ರಸ್ತೆಯ ಪೋಷಕರನ್ನ ನಿಂದಿಸಿ ಕಳುಹಿಸಿದ್ದರು.
ಇದಾದ ಬಳಿಕವೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದ ಕುಟುಂಬ ನ್ಯಾಯಕ್ಕಾಗಿ ಪಂಚಾಯ್ತಿ ಮೆಟ್ಟಿಲೇರಿದೆ. ಇದಕ್ಕೆ ಪ್ರತಿಯಾಗಿ ಪಂಚಾಯ್ತಿ ಪದಾಧಿಕಾರಿಗಳು ಈ ವಿಚಿತ್ರ ತೀರ್ಪನ್ನ ನೀಡಿದ್ದಾರೆ. ಆದರೆ ಪಂಚಾಯ್ತಿ ತೀರ್ಪಿನಿಂದ ಅಸಮಾಧಾನಗೊಂಡ ಬಾಲಕಿಯ ಪೋಷಕರು ಎಫ್ಐಆರ್ ದಾಖಲಿಸಿದ್ದು ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.