ಗರ್ಭಾವಸ್ಥೆಯಲ್ಲಿ ಮಹಿಳೆಯರು ದೈಹಿಕವಾಗಿ ದುರ್ಬಲರಾಗುತ್ತಾರೆ. ಇದರಿಂದಾಗಿ ಅನೇಕ ರೋಗಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಹಾಗಾಗಿ ಗರ್ಭಿಣಿಯರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಹಾರ್ಮೋನುಗಳು ಏರುಪೇರಾಗುವುದರಿಂದ ಮಹಿಳೆಯರು ದೈಹಿಕವಾಗಿ ದುರ್ಬಲರಾಗುತ್ತಾರೆ. ತಾಯಿ ಮತ್ತು ಮಗುವಿನ ಆರೋಗ್ಯವು ಉತ್ತಮವಾಗಿರಬೇಕೆಂದರೆ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಲೇಬೇಕು.
ಗರ್ಭಾವಸ್ಥೆಯ ಮಧುಮೇಹ – ಗರ್ಭಿಣಿಯರಿಗೆ ಜೆಸ್ಟೇಶನಲ್ ಡಯಾಬಿಟಿಸ್ ಅಪಾಯವು ತುಂಬಾ ಹೆಚ್ಚು. ಗರ್ಭಾವಸ್ಥೆಯಲ್ಲಿ ಸಂಭವಿಸುವ ಮಧುಮೇಹ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗು ಇಬ್ಬರಿಗೂ ಹಾನಿಕಾರಕವಾಗಿದೆ. ಇದನ್ನು ತಪ್ಪಿಸಲು ನಿಯಮಿತ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಒತ್ತಡದಿಂದ ದೂರವಿರಬೇಕು. ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಲಘು ವ್ಯಾಯಾಮ ಮಾಡುತ್ತಿರಿ.
ರಕ್ತಹೀನತೆ – ಗರ್ಭಾವಸ್ಥೆಯಲ್ಲಿ ರಕ್ತದ ಕೊರತೆ, ಹಿಮೋಗ್ಲೋಬಿನ್ ಕೊರತೆ ಅಥವಾ ರಕ್ತಹೀನತೆ ಸಾಮಾನ್ಯ ಸಮಸ್ಯೆಗಳು. ಗರ್ಭಾವಸ್ಥೆಯಲ್ಲಿ ದೇಹಕ್ಕೆ ಸಾಕಷ್ಟು ರಕ್ತದ ಅಗತ್ಯವಿರುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತವು ಉತ್ಪತ್ತಿಯಾಗದಿದ್ದರೆ, ರಕ್ತಹೀನತೆ ಉಂಟಾಗುತ್ತದೆ. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತೊಂದರೆಯಾಗಬಹುದು.
ಥೈರಾಯ್ಡ್ – ಗರ್ಭಿಣಿ ಮಹಿಳೆಯರಿಗೆ ಥೈರಾಯ್ಡ್ ಅಪಾಯವೂ ತುಂಬಾ ಹೆಚ್ಚು. ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಗ್ರಂಥಿಯು ಹೆಚ್ಚಾಗುತ್ತದೆ. ಇದರಿಂದಾಗಿ ಹಾರ್ಮೋನುಗಳ ಮಟ್ಟವು ಅಸಮತೋಲನಗೊಳ್ಳುತ್ತದೆ. ಇದರಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆಯಾಗಬಹುದು.
ಯುಟಿಐ – ಗರ್ಭಾವಸ್ಥೆಯಲ್ಲಿ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಗರ್ಭಿಣಿ ಮಹಿಳೆಯರಲ್ಲಿ ಗರ್ಭಾಶಯದ ಸೋಂಕು ಸಾಮಾನ್ಯ. ಹಾಗಾಗಿ ಗುಪ್ತಾಂಗಗಳ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕು. ಯುಟಿಐನ ಯಾವುದೇ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿಗೆ ಹೋಗಬೇಕು.