ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ವೃದ್ಧ ದಂಪತಿ ತಮ್ಮ ಮನೆಯ ನೀರಿನ ಟ್ಯಾಂಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೀರಿನ ತೊಟ್ಟಿಯ ಬಳಿ ಪತ್ತೆಯಾದ ದಂಪತಿಗಳು ಬಿಟ್ಟುಹೋದ ಟಿಪ್ಪಣಿಯಲ್ಲಿ ತಮ್ಮ ಆಸ್ತಿಯನ್ನು ದೋಚಲು ಬಯಸಿ ತಮ್ಮ ಮಕ್ಕಳು ತಮ್ಮ ಮೇಲೆ ಮಾಡಿದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ಕರ್ನಿ ಕಾಲೋನಿಯ ನಿವಾಸಿಗಳಾದ ಹಜಾರಿ ರಾಮ್ ವಿಷ್ಣೋಯ್(65) ಮತ್ತು ಅವರ ಪತ್ನಿ ಚವಾಲಿ ದೇವಿ(62) ಅವರ ಮೃತದೇಹಗಳು ಅವರ ಮನೆಯ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿವೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೀಶ್ ದೇವ್ ತಿಳಿಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ವ್ಯಕ್ತಿ ಬಿಟ್ಟು ಹೋಗಿದ್ದ ಎನ್ನಲಾದ ಚೀಟಿಯಲ್ಲಿ ತನ್ನ ಪುತ್ರರು ಮತ್ತು ಸಂಬಂಧಿಕರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಎಂದು ತೋರುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮತ್ತು ತನಿಖೆ ಪೂರ್ಣಗೊಂಡ ನಂತರ ವಿಷಯಗಳು ಸ್ಪಷ್ಟವಾಗುತ್ತವೆ ಎಂದು ಎಸ್ಹೆಚ್ಒ ಹೇಳಿದರು.
ದಂಪತಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ನಾಲ್ವರು ಮಕ್ಕಳಿದ್ದರು. ತಮ್ಮ ಮಗನಾದ ರಾಜೇಂದ್ರ ಮೂರು ಬಾರಿ ಥಳಿಸಿದ್ದು, ಮತ್ತೊಬ್ಬ ಮಗ ಸುನೀಲ್ ಎರಡು ಬಾರಿ ಥಳಿಸಿದ್ದಾನೆ ಎಂದು ದಂಪತಿ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ತಮ್ಮ ಸೊಸೆಯಂದಿರು ಕನಿಷ್ಠ ಐದು ಬಾರಿ ಥಳಿಸಿದ್ದಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಊಟ ಆಹಾರ ನೀಡುವುದನ್ನು ನಿಲ್ಲಿಸಿದ್ದಾರೆ. ಒಂದು ಬಟ್ಟಲನ್ನು ತೆಗೆದುಕೊಂಡು ಭಿಕ್ಷೆ ಬೇಡುವಂತೆ ತಾಯಿಗೆ ಹೇಳಿದ್ದಾರೆ ಎನ್ನಲಾಗಿದೆ.