ಐತಿಹಾಸಿಕ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆದು ಸತ್ಯಶೋಧನೆ ತನಿಖೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಭಾರತೀಯ ಪುರಾತತ್ವ ಇಲಾಖೆ ಕೋಣೆಗಳ ಒಳಗೆ ನಡೆಯುತ್ತಿರುವ ನವೀಕರಣದ ಸುದ್ದಿ ಚಿತ್ರಗಳನ್ನು ಒಳಗೊಂಡ ವಿವರಗಳನ್ನು ಬಿಡುಗಡೆ ಮಾಡಿದೆ.
ನದಿ ಪಾತ್ರದ ಕಡೆಯಲ್ಲಿರುವ ಕೋಣೆಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಆರಂಭಿಸಲಾಗಿದೆ. ಅಳಿಸಿ ಹೋಗಿರುವ ಸುಣ್ಣದ ಪ್ಲಾಸ್ಟರ್ ಮತ್ತು ಹಾಳಾಗಿರುವ ಭಾಗವನ್ನು ತೆಗೆದು ಸುಣ್ಣದ ಪ್ಲಾಸ್ಟರ್ ಹಾಕುವ ಕೆಲಸವನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಅಯೋಧ್ಯೆಯ ಬಿಜೆಪಿ ಘಟಕದ ಮಾಧ್ಯಮ ಮುಖ್ಯಸ್ಥ ರಜನೀಶ್ ಸಿಂಗ್ ಅವರು ತಾಜ್ ಮಹಲ್ ನಲ್ಲಿನ ಕೋಣೆಗಳನ್ನು ತೆರೆದು ಸತ್ಯಶೋಧನೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲಕ್ನೋ ಪೀಠದ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ವಿಭಾಗೀಯ ಪೀಠ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಮಧ್ಯೆ, ಕೋಣೆಗಳಲ್ಲಿ ಯಾವುದೇ ವಿಗ್ರಹಗಳು ಕಂಡುಬಂದಿಲ್ಲ ಎಂಬುದು ಇಲ್ಲಿಯವರೆಗೆ ಪರಿಶೀಲನೆ ನಡೆಸಲಾಗಿರುವ ದಾಖಲೆಗಳು ತಿಳಿಸಿವೆ. ಅಲ್ಲದೇ, ಕೋಣೆಗಳ ಜೀರ್ಣೋದ್ಧಾರ ಕಾರ್ಯವನ್ನು ಮೂರು ತಿಂಗಳ ಹಿಂದಷ್ಟೇ ಆರಂಭಿಸಲಾಗಿದೆ. ಹೀಗಾಗಿ ಕೋಣೆಗಳ ಸತ್ಯಶೋಧನೆ ತನಿಖೆ ನಡೆಸುವಂತೆ ಕೋರುವ ಅಗತ್ಯ ಕಂಡುಬರುವುದಿಲ್ಲ ಎಂದು ಪುರಾತತ್ವ ಇಲಾಖೆ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.