ಬೆಂಗಳೂರು: ಪಹಣಿಗಳಲ್ಲಿನ ಲೋಪ ದೋಷ ಸರಿಪಡಿಸಲು ಪ್ರಸ್ತುತ ತಹಶೀಲ್ದಾರ್ ಗಳಿಗೆ ನೀಡಿರುವ ಅಧಿಕಾರವನ್ನು 2023ರ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಪಹಣಿ ತಿದ್ದುಪಡಿ ಅಧಿಕಾರ ಸಹಾಯಕ ಆಯುಕ್ತರಿಗೆ ಇತ್ತು. ಇದನ್ನು ತಹಶೀಲ್ದಾರ್ ಗಳಿಗೆ ನೀಡಿ ಆದೇಶ ಹೊರಡಿಸಲಾಗಿತ್ತು. ಕಂದಾಯ ಅದಾಲತ್ ಗಳ ಮೂಲಕ ಪಹಣಿಗಳಲ್ಲಿನ ಲೋಪ ದೋಷ ಸರಿಪಡಿಸಲು ತಹಶೀಲ್ದಾರಗಳಿಗೆ ನೀಡಿರುವ ಅಧಿಕಾರವನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಅಧಿಕಾರ 2020ರ ಡಿಸೆಂಬರ್ ಗೆ ಮುಕ್ತಾಯವಾಗಿದ್ದು, ಪಹಣಿ ಲೋಪ ದೋಷಗಳ ಸರಿಪಡಿಸುವ ಕಾರ್ಯ ಸುಗಮವಾಗಿ ನಡೆಯಬೇಕಿರುವುದರಿಂದ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿದೆ.
ಎಲ್ಲಾ ತಾಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳ ಮಟ್ಟದಲ್ಲಿ ಕಂದಾಯ ಅದಲತ್ ನಡೆಸಲಾಗುತ್ತಿದ್ದು, ಸಿಬ್ಬಂದಿಯ ಅಗತ್ಯ ಇದ್ದ ಕಾರಣ ಕಂದಾಯ ನಿವೃತ್ತ ನೌಕರರ ಸೇವೆಯನ್ನು ಪಡೆದುಕೊಳ್ಳಲಾಗಿತ್ತು. ಸಾಕಷ್ಟು ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಮೊದಲಿನಂತೆ ಸಿಬ್ಬಂದಿ ಅಗತ್ಯ ಇರುವುದಿಲ್ಲ. ಅರ್ಜಿಗಳ ವಿಲೇವಾರಿಗೆ ಆಯಾ ಕಚೇರಿ ಸಿಬ್ಬಂದಿ ನಿಯೋಜಿಸಬೇಕು ಎಂದು ಹೇಳಲಾಗಿದೆ.
ಬಾಕಿ ಇರುವ ಮತ್ತು ಸ್ವೀಕೃತ ಅರ್ಜಿಗಳನ್ನು 2020ರ ಡಿಸೆಂಬರ್ ಅಂತ್ಯಕ್ಕೆ ತಿದ್ದುಪಡಿ ಕಾರ್ಯ ಪೂರ್ಣಗೊಳಿಸಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನ ತಹಶೀಲ್ದಾರ್ ಪ್ರಗತಿ ಪರಿಶೀಲಿಸಿ ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕೆಂದು ಹೇಳಲಾಗಿದೆ.