ಬೆಂಗಳೂರು: ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕೆಆರ್ ಪುರ ಹಿಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಮೊಬೈಲ್ ಸಂಖ್ಯೆಯಲ್ಲಿಯೂ ಸಂಖ್ಯಾಶಾಸ್ತ್ರದ ಹಿಂದೆ ಬಿದ್ದಿರುವುದು ಗೊತ್ತಾಗಿದೆ.
500 ಕೋಟಿಗೂ ಅಧಿಕ ಅಕ್ರಮ ಆಸ್ತಿ ಹೊಂದಿರುವ ಅವರು 15 ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದು, ಇವುಗಳಲ್ಲಿ 10ಕ್ಕಿಂತ ಹೆಚ್ಚು ಸಿಮ್ ಗಳ ಕೊನೆಯ ಸಂಖ್ಯೆ 1368 ಆಗಿದೆ.
ಲೋಕಾಯುಕ್ತ ಪೊಲೀಸರು ಬುಧವಾರ ಮತ್ತು ಗುರುವಾರ ಅಜಿತ್ ರೈ ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 15 ಕ್ಕೂ ಅಧಿಕ ಸಿಮ್ ಕಾರ್ಡ್ ಗಳು ಪತ್ತೆಯಾಗಿದ್ದು, ಎಲ್ಲವೂ ಚಾಲ್ತಿಯಲ್ಲಿವೆ. ಇವುಗಳನ್ನು ಬಳಸುತ್ತಿದ್ದ ಅಜಿತ್ ರೈ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಮಾತನಾಡಲು ಬೇರೆ ಬೇರೆ ಸಿಮ್ ಬಳಕೆ ಮಾಡಿರುವ ಶಂಕೆ ಇದ್ದು, ಎಲ್ಲಾ ನಂಬರ್ ಗಳ ಕರೆಯ ಮಾಹಿತಿ ಪಡೆಯಲು ಸಕ್ಷಮ ಪ್ರಾಧಿಕಾರಗಳಿಗೆ ಕೋರಿಕೆ ಸಲ್ಲಿಸಲಾಗಿದೆ.
ಬಂಧಿತ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಶಿಫಾರಸು ಮಾಡಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಕೆ ವರದಿ ಸಲ್ಲಿಸಿದ್ದಾರೆ.
11 ದುಬಾರಿ ಬೆಲೆಯ ಕಾರ್ ಮತ್ತು ದ್ವಿಚಕ್ರ ವಾಹನ ಹೊಂದಿರುವ ಅಜಿತ್ ರೈ ಅವರ ಹೆಚ್ಚಿನ ವಾಹನಗಳ ನೋಂದಣಿ ಸಂಖ್ಯೆ 1368 ಆಗಿದೆ. ಅದೇ ಮಾದರಿಯಲ್ಲಿ ಅವರು ಮೊಬೈಲ್ ಸಿಮ್ ಕಾರ್ಡ್ ನಂಬರ್ ಹೊಂದಿದ್ದಾರೆ.