ಶಿವಮೊಗ್ಗ: ರೋಟರಿ ಕ್ಲಬ್ ರಾಜ್ಯದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ `ಜ್ಞಾನದೀವಿಗೆ’ ಎಂಬ ಯೋಜನೆ ರೂಪಿಸಲಾಗಿದೆ.
ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಎನ್‍ಸಿಇಆರ್‍ಟಿ ಪಠ್ಯಕ್ರಮದಂತೆ ತಂತ್ರಾಂಶ ಒಳಗೊಂಡ ಟ್ಯಾಬ್ಲೆಟ್ ನೀಡಲಾಗುವುದು.
ಈ ಟ್ಯಾಬ್ ನಲ್ಲಿ ಪಠ್ಯಕ್ರಮ ಅಳವಡಿಸಲಾಗಿರುತ್ತದೆ. ಸಾಮಾನ್ಯ ಮೊಬೈಲ್‍ನಂತೆಯೇ ಚಾರ್ಜಿಂಗ್ ಮಾಡಿ ಬಳಸಬಹುದಾಗಿದೆ ಸರ್ಕಾರಿ ಶಾಲೆಗಳಿಗೆ ಮಾತ್ರ ನೀಡಲಾಗುತ್ತದೆ. ಇಬ್ಬರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಟ್ಯಾಬ್ ನೀಡಲಾಗುವುದುಮಕ್ಕಳು ಇದನ್ನು ಉಪಯೋಗಿಸಿಕೊಂಡು ಮತ್ತೆ ಶಾಲೆಗೆ ವಾಪಾಸ್ ಕೊಡಬೇಕು. ಪಠ್ಯಕ್ರಮವನ್ನು ನವೀಕರಿಸಿ ಮುಂದಿನ ವರ್ಷಕ್ಕೂ ಇದನ್ನು ಬಳಸಿಕೊಳ್ಳುವ ರೀತಿಯಲ್ಲಿ ಸಿದ್ದಪಡಿಸಲಾಗಿದೆ.
ಒಂದು ಟ್ಯಾಬ್ 3495 ರೂ. ವೆಚ್ಚವಾಗಲಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಎಸ್‍ಎಸ್‍ಎಲ್‍ಸಿ ಓದುವ ಮಕ್ಕಳಿದ್ದಾರೆ. ಹಾಗಾಗಿ 12.5 ಲಕ್ಷ ಟ್ಯಾಬ್ ಬೇಕಾಗುತ್ತದೆ. ಇದಕ್ಕೆ ಬೇಕಾಗುವ ಹಣವನ್ನು ರಾಜ್ಯದ ಎಲ್ಲ ರೋಟರಿ ಕ್ಲಬ್‍ಗಳು ದೇಣಿಗೆ ಮೂಲಕ ಸಂಗ್ರಹಿಸಿ ಶಿಕ್ಷಣ ಇಲಾಖೆಯ ಉಸ್ತುವಾರಿಯೊಂದಿಗೆ ಒದಗಿಸುವ ಒಂದು ಬಹುದೊಡ್ಡ ಅಭೂತಪೂರ್ವ ಯೋಜನೆ ಇದಾಗಿದೆ.
ರೋಟರಿ ಜಿಲ್ಲೆ 3182ರ ಪಿಡಿಜಿ ಹೆಚ್.ಎಲ್. ರವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆಗೆ ದೇಣಿಗೆ ನೀಡಬಹುದಾಗಿದ್ದು, ಆದಾಯ ತೆರಿಗೆ 80 ಜಿ ವಿನಾಯಿತಿ ಸೌಲಭ್ಯ ಇರುತ್ತದೆ. ಆಸಕ್ತ ದಾನಿಗಳು ತಮ್ಮ ಸ್ಥಳೀಯ ರೋಟರಿ ಕ್ಲಬ್‍ಗಳನ್ನು ಸಂಪರ್ಕಿಸಬಹುದಾಗಿದೆ. ಅಕೌಂಟ್ ನಂ.7052000100100237201, ಐಎಫ್‍ಎಸ್‍ಸಿ ಕೋಡ್ ಕೆಎಆರ್‍ಬಿ 0000705, ಕರ್ನಾಟಕ ಬ್ಯಾಂಕ್ ಮುಖ್ಯಶಾಖೆ, ಶಿವಮೊಗ್ಗ, ಮೊ.ಸಂ. 9448396400ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಪಬ್ಲಿಕ್ ಟಿವಿ ಸಹಯೋಗದಲ್ಲಿ ನ.8 ರ ಬೆಳಿಗ್ಗೆ 9 ರಿಂದ ನಡೆಯಲಿದೆ. ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಸಾಂಕೇತಿಕವಾಗಿ 300 ಟ್ಯಾಬ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.