ದುಬೈ: ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೈಲುಗಲ್ಲು ಸಾಧಿಸಿದ್ದಾರೆ. ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಮೊಹಮ್ಮದ್ ರಿಜ್ವಾನ್ ಪಾತ್ರರಾಗಿದ್ದಾರೆ.
ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ 29 ವರ್ಷದ ರಿಜ್ವಾನ್ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಭಾರತದ ವಿರುದ್ಧ 79 ರನ್ ಹಾಗೂ ನಮೀಬಿಯಾ ವಿರುದ್ಧ ಕೂಡ 79 ರನ್ ಗಳಿಸಿದ್ದಾರೆ. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 1000 ರನ್ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ರಿಜ್ವಾನ್ ಅವರದ್ದಾಗಿದೆ. ದುಬೈನಲ್ಲಿ ನಡೆಯುತ್ತಿರುವ 2021ರ ಟಿ-20 ವಿಶ್ವಕಪ್ ನಲ್ಲಿ ಅವರು ಒಟ್ಟು 266 ರನ್ ಗಳಿಸಿದ್ದಾರೆ.
ಇದಕ್ಕೂ ಮೊದಲು 2019 ರಲ್ಲಿ, ಟಿ-20 ಕ್ರಿಕೆಟ್ ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐರ್ಲೆಂಡ್ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅವರು, ಕೇವಲ 20 ಇನ್ನಿಂಗ್ಸ್‌ಗಳಲ್ಲಿ 41.55 ಸರಾಸರಿ ಮತ್ತು 140.60 ಸ್ಟ್ರೈಕ್ ರೇಟ್‌ನಲ್ಲಿ 748 ರನ್ ಗಳಿಸಿದ್ದರು.
ಪಾಕಿಸ್ತಾನದ ರಿಜ್ವಾನ್ 2021ರಲ್ಲಿ 23 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 86.08 ರ ಸರಾಸರಿ ಮತ್ತು 136.45 ರ ಸ್ಟ್ರೈಕ್ ರೇಟ್‌ನಲ್ಲಿ 1033 ರನ್‌ಗಳನ್ನು ಸಿಡಿಸಿದ್ದಾರೆ. ಈ ಅವಧಿಯಲ್ಲಿ ಅವರು 10 ಅರ್ಧ ಶತಕಗಳು ಮತ್ತು ಒಂದು ಶತಕವನ್ನು ಸಿಡಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ ಅಜೇಯ 104 ಆಗಿದೆ.