ಪತಿಯ ಹಣಕಾಸು ವ್ಯವಹಾರದ ಮೇಲೆ ಹಿಡಿತ ಸಾಧಿಸಿದ ಪತ್ನಿ 62 ವರ್ಷದ ಪತಿಯನ್ನು ಹತ್ಯೆ ಮಾಡಿದ ಘಟನೆ ನ್ಯೂ ಸೌತ್ ವೇಲ್ಸ್ ನಲ್ಲಿ ಬೆಳಕಿಗೆ ಬಂದಿದೆ . ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸುಪ್ರೀಂ ಕೋರ್ಟ್ ಆರೋಪಿ ಮಹಿಳೆಯ ಜಾಮೀನು ನಿರಾಕರಿಸಿದೆ.
ತನ್ನ 62 ವರ್ಷದ ಪತಿ ಮಮ್ದೌಹ್ “ಎಮಾದ್” ನೌಫ್ಲ್ ನನ್ನು ಹತ್ಯೆ ಮಾಡಿದ ಆರೋಪದಲ್ಲಿ 53 ವರ್ಷದ ಆಸ್ಟ್ರೇಲಿಯಾದ ಮಹಿಳೆ ನಿರ್ಮೀನ್ ನೌಫ್ಲ್ ನ ಜಾಮೀನು ನಿರಾಕರಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾದ ಆರೋಪಿತ ಮಹಿಳೆ ತನ್ನ ಪತಿಯನ್ನು ಕೊಂದು ವಿರೂಪಗೊಳಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರಕಾರ, ಕಳೆದ ವರ್ಷ ಮೇ 3 ರಂದು ಪಶ್ಚಿಮ ಸಿಡ್ನಿಯಲ್ಲಿರುವ ತಮ್ಮ ಮನೆಯಲ್ಲಿ ಚಾಕು ಮತ್ತು ವಿದ್ಯುತ್ ಗರಗಸದಿಂದ ಪತಿಯನ್ನು ಹತ್ಯೆ ಮಾಡಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಪತಿಯ ದೇಹದ ಭಾಗಗಳನ್ನು 30 ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿ ನಗರದ ಅನೇಕ ಕಡೆ ಕಸದ ಬಿನ್ ಗಳಲ್ಲಿ ಎಸೆಯಲಾಗಿತ್ತು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಪೊಲೀಸರು ಕಳೆದ ತಿಂಗಳು ನಿರ್ಮೀನ್ ನೌಫ್ಲ್ ಳನ್ನು ಬಂಧಿಸಿದರು. ಆದರೆ ಆಕೆಯ ಪತಿಯ ಅವಶೇಷಗಳು ಇನ್ನೂ ಪತ್ತೆಯಾಗಿಲ್ಲ.
ಕಳೆದ ಮೇ ತಿಂಗಳಲ್ಲಿ ತನ್ನ ಪತ್ನಿಗೆ ಈಜಿಪ್ಟ್ ನಲ್ಲಿರುವ ತನ್ನ ಆಸ್ತಿಗಳ ಕಾನೂನು ಅಧಿಕಾರವನ್ನು ನೀಡಿದಾಗ , ಪತಿ ಮಮ್ದೌಹ್ “ಎಮಾದ್” ನೌಫ್ಲ್ ನನ್ನು ಕೊಂದು ಆಸ್ತಿಗಳ ಮೇಲೆ ಅಧಿಕಾರ ಸಾಧಿಸಲು ಮುಂದಾಗಿದ್ದು ಕೊಲೆಗೆ ಪ್ರೇರಣೆ ಎಂದು ಗೊತ್ತಾಗಿದೆ.
ಅಷ್ಟೇ ಅಲ್ಲದೇ ತನ್ನ ಪತಿ ಮತ್ತೊಬ್ಬಳ ಸಂಬಂಧದಲ್ಲಿ ಇದ್ದ ಬಗ್ಗೆ ತಿಳಿದ ಮಹಿಳೆ ಕೊಲೆಗೆ ಮುಂದಾದಳು. ಹತ್ಯೆ ದಿನ ಮಹಿಳೆಯ ಚಲನವಲನ ಗಮನಿಸಿದ ಪ್ರತ್ಯಕ್ಷ ದರ್ಶಿಗಳು ಸೇರಿದಂತೆ ಸಾಕ್ಷಿಗಳ ಹೇಳಿಕೆ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಲಾಗಿದೆ.