![](https://kannadadunia.com/wp-content/uploads/2022/12/indiantrain-1521720280.jpg)
ಬೆಂಗಳೂರು: ಇನ್ಮುಂದೆ ರೈಲುಗಳಲ್ಲಿ ಕೆಲವು ವಸ್ತುಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ರೈಲುಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬೆಂಕಿ ಹೊತ್ತಿಸುವಂತಹ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ರೈಲ್ವೆ ಇಲಾಖೆ ಸೂಚನೆ ನೀಡಿದೆ.
ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಸ್ಟವ್, ಮ್ಯಾಚ್ ಬಾಕ್ಸ್, ಸಿಗರೇಟ್ಸ್, ಲೈಟರ್, ಪಟಾಕಿ ಸೇರಿದಂತೆ ಯಾವುದೆ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಬೆಂಗಳೂರಿನ ವಿಭಾಗಿಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಪ್ರಯಾಣಿಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ರೈಲಿನಲ್ಲಿ ಬೆಂಕಿ ಹೊತ್ತಿಸುವಂತಹ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯಡಿ ಅಪರಾಧ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು ಚಲಿಸುತ್ತಿರುವ ರೈಲಿನಲ್ಲಿ ಹಾಗೂ ರೈಲ್ವೆ ಆವರಣಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈಗಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಪಟಾಕಿ ಸೇರಿದಂತೆ ಸುಡುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸಿದ್ದಕ್ಕೆ 5 ಪ್ರಕರಣ ದಾಖಲಾಗಿದ್ದು, ರೈಲು ಹಾಗೂ ರೈಲ್ವೆ ಆವರಣಗಳಲ್ಲಿ ಧೂಮಪಾನ ಮಾಡಿದ್ದಕ್ಕೆ 258 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.