ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ಈಜುಕೊಳದಲ್ಲಿ ಮುಳುಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಬಾಗಲಗುಂಟೆ ನಿವಾಸಿ ಧನುಷ್(15) ಮೃತಪಟ್ಟ ದುರ್ದೈವಿ ಎಂದು ಹೇಳಲಾಗಿದೆ. ಅವರು ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನವರಾಗಿದ್ದಾರೆ. ಆರ್.ಡಿ. ಕ್ಲಬ್ ಹೆಸರಿನ ಈಜುಕೊಳದಲ್ಲಿ ಧನುಷ್ ಮುಳುಗಿ ಸಾವನ್ನಪ್ಪಿದ್ದು, ಈಜುಕೊಳದಲ್ಲಿ ಸೂಕ್ತ ಮಾರ್ಗದರ್ಶಕರು ಇಲ್ಲದೆ ಅವಘಡ ನಡೆದಿರುವ ಆರೋಪ ಕೇಳಿ ಬಂದಿದೆ.
ಕ್ಲಬ್ ಮಾಲೀಕರು ಆಸ್ಪತ್ರೆ ಬಳಿ ಬರಬೇಕೆಂದು ಪೋಷಕರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಬಳಿ ಮಗನ ಶವ ಇಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಲಬ್ ಮಾಲೀಕರು ಸ್ಥಳಕ್ಕೆ ಬರುವವರೆಗೂ ಶವ ಪಡೆಯದಿರಲು ನಿರ್ಧಾರ ಕೈಗೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.