ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಗಾಯತ್ರಿದೇವಿ ಉದ್ಯಾನವನದಲ್ಲಿ ಈಜುಕೊಳ ಮತ್ತು ಮಲ್ಟಿ ಜಿಮ್ ನಿರ್ಮಿಸುವುದು ಪಾರ್ಕ್ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಈಜುಕೊಳ ಅಥವಾ ಜಿಮ್ ನಿರ್ಮಿಸುವುದನ್ನು ವಿರೋಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಗೆ ಆದೇಶ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ(ಪಿಐಎಲ್) ಅನುಮತಿ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ತೆರೆದ ಸ್ಥಳ(ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ 1985(ವಿಭಾಗ 8 (1) ಮತ್ತು ನಿಯಮಗಳು 1985 (ನಿಯಮ 6) ಅಡಿಯಲ್ಲಿ ಅಂತಹ ನಿರ್ಮಾಣಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿದೆ.
ಮರಿಯಪ್ಪನ ಪಾಳ್ಯ ಪಾರ್ಕ್ ಎಂದೂ ಕರೆಯಲ್ಪಡುವ ಈ ಉದ್ಯಾನವನವು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶನಗರದ ಬಿಬಿಎಂಪಿ ವಾರ್ಡ್ 98 ರಲ್ಲಿದೆ. ಸ್ಥಳೀಯ ನಿವಾಸಿಗಳಾದ ಜೆ. ಶ್ರೀನಿವಾಸ್, ಆರ್. ಲಕ್ಷ್ಮೀನಾರಾಯಣ, ಬಿ.ಎಸ್. ಪ್ರವೀಣ್ ಕುಮಾರ್ ಮತ್ತು ಬಿ.ಕೆ. ಹರೀಶ್ ಕುಮಾರ್ ಪಿಐಎಲ್ ಸಲ್ಲಿಸಿದ್ದರು.
‘ಭೂ ಮಾಫಿಯಾ’ ನೀಡಿದ ಪ್ರಸ್ತಾವನೆಗಳ ಆಧಾರದ ಮೇಲೆ ಬಿಬಿಎಂಪಿಯು 6 ಕೋಟಿ ರೂಪಾಯಿ ವೆಚ್ಚದಲ್ಲಿ ಈಜುಕೊಳ, ಕ್ರೀಡಾ ಸಂಕೀರ್ಣ, ಮಲ್ಟಿ ಜಿಮ್, ಸ್ಕ್ವಾಷ್ ಕೋರ್ಟ್ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ವಕೀಲ ಜಿ. ಆರ್. ಮೋಹನ್ ಆರೋಪಿಸಿದ್ದರು. ಕಟ್ಟಡ ನಿರ್ಮಾಣದ ವಿರುದ್ಧ ಸ್ಥಳೀಯರು ರಾಜಾಜಿನಗರ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು.