ಆಹಾರ ವಿತರಣಾ ಸಂಸ್ಥೆಯಾದ ಸ್ವಿಗ್ಗಿ ಹಾಗೂ ಝೊಮೆಟೊ ಅಂತರ್ಜಾಲದಲ್ಲಿ ಭಾರಿ ಸುದ್ದಿಯಲ್ಲಿದೆ. ಈ ಬಾರಿ ವಿತರಣಾ ಸಿಬ್ಬಂದಿಯ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.
ದೆಹಲಿಯ ಸುಡುತ್ತಿರುವ ಬಿಸಿಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್, ಝೊಮೆಟೊ ಆಹಾರ ವಿತರಣಾ ಸಿಬ್ಬಂದಿಗೆ ಸಹಾಯಹಸ್ತ ಚಾಚಿದ್ದಾರೆ. ಸ್ವಿಗ್ಗಿ ಹಾಗೂ ಝೊಮೆಟೊ ಸಂಸ್ಥೆಯ ನಡುವೆ ತೀವ್ರತರವಾದ ಸ್ಪರ್ಧೆ ಇದ್ದರೆ, ಆಹಾರ ವಿತರಣಾ ಸಿಬ್ಬಂದಿ ಪರಸ್ಪರ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು, ಝೊಮೆಟೊ ಸಂಸ್ಥೆಯ ಡೆಲಿವರಿ ಬಾಯ್ ಆಹಾರ ವಿತರಿಸಲು ಸೈಕಲ್ ನಲ್ಲಿ ಸಾಗುತ್ತಿದ್ರೆ, ಸ್ವಿಗ್ಗಿ ಡೆಲಿವರಿ ಬಾಯ್ ಬೈಕ್ ನಲ್ಲಿ ಸಾಗುತ್ತಿದ್ರು. ಈ ವೇಳೆ ಸ್ವಿಗ್ಗಿ ಸಿಬ್ಬಂದಿ, ಝೊಮಾಟೊ ಡೆಲಿವರಿ ಬಾಯ್ ನ ಸೈಕಲ್ ಅನ್ನು ತನ್ನ ಕೈಯಲ್ಲಿ ಹಿಡಿದು ಬೈಕ್ ನ ವೇಗಕ್ಕೆ ಸರಿಸಮವಾಗಿ ಸಾಗಲು ಸಹಾಯ ಮಾಡಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ʼಮಾನವೀಯತೆಯಿಂದ ಒಗ್ಗೂಡಿದ, ಕಂಪನಿಗಳಿಂದ ವಿಭಜಿಸಲ್ಪಟ್ಟಿದೆʼ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.