
ಫುಡ್ ಡೆಲಿವರಿ ಏಜೆಂಟ್‌ಗಳು ಸರಿಯಾದ ಸಮಯದಲ್ಲಿ ತಮ್ಮ ಗ್ರಾಹಕರ ಆರ್ಡರ್‌ಗಳನ್ನು ಡೆಲಿವರಿ ಮಾಡಲು ಏನೆಲ್ಲಾ ಪಾಡುಗಳನ್ನು ಅನುಭವಿಸುತ್ತಾರೆ ಎಂಬುದನ್ನು ನಾವೆಲ್ಲಾ ಸಾಕಷ್ಟು ಬಾರಿ ಕೇಳಿದ್ದೇವೆ.
30 ವರ್ಷ ವಯಸ್ಸಿನ ಈ ಇಸಿಇ ಪದವೀಧರ ಹೊಟ್ಟೆಪಾಡಿಗಾಗಿ ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿ ಮಾಡುವ ವೇಳೆ ತಾನು ಪಡಬೇಕಾದ ಪಾಡುಗಳ ಕುರಿತು ಹೇಳಿಕೊಂಡಿದ್ದಾರೆ. ’ಫ್ಲಾಶ್’ ಹೆಸರಿನ ಟೆಕ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಪ್ರಿಯಾಶಿ ಚಂಡೇಲ್ ಈ ಕುರಿತು ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬರು ತಮ್ಮ ಯುಲು ಇಬೈಕ್ ಚಾರ್ಕ್ ಮಾಡಲು ಹಣವಿಲ್ಲದ ಕಾರಣ ಫುಡ್ ಆರ್ಡರ್ ಡೆಲಿವರಿ ಮಾಡಲೆಂದು ಮೂರು ಕಿಮೀ ನಡೆದುಕೊಂಡು ಹೋದ ಕುರಿತು ಪ್ರಿಯಾಂಶಿ ಈ ಪೋಸ್ಟ್ ಮಾಡಿದ್ದಾರೆ.
ಸಾಹೀಲ್ ಸಿಂಗ್ ಹೆಸರಿನ ಈ ವ್ಯಕ್ತಿ ಇಸಿಇ ಪದವೀಧರನಾಗಿದ್ದು, ನಿಂಜಾಕಾರ್ಟ್, ಬೈಜೈಸ್‌ನಲ್ಲಿ ಕೆಲಸ ಮಾಡಿದ್ದಾರೆ. ಕೋವಿಡ್ ಕಾರಣದಿಂದ ತಮ್ಮೂರು ಜಮ್ಮುಗೆ ತೆರಳಬೇಕಾಗಿ ಬಂದ ಬಳಿಕ ಹೊಟ್ಟೆಪಾಡಿಗಾಗಿ, ಡೆಲಿವರಿ ಒಂದಕ್ಕೆ 20 – 25ರೂ. ನೀಡುವ ಫುಡ್ ಡೆಲಿವರಿ ಕೆಲಸಕ್ಕೆ ಮುಂದಾಗಿದ್ದಾರೆ ಸಾಹೀಲ್. ಇವರಿಗೆ ಕುಡಿಯಲು ಸ್ವಲ್ಪ ನೀರು ಹಾಗೂ 500ರೂ.ಗಳನ್ನು ಕೊಟ್ಟ ಪ್ರಿಯಾಶಿ, ಆತನ ಇಡೀ ಕಥೆಯನ್ನು ಹಂಚಿಕೊಂಡಿದ್ದಾರೆ.
“ಮೇಡಂ ಪ್ರಯಾಣ ಮಾಡಲು ನನ್ನ ಬಳಿ ಯಾವುದೇ ಸ್ಕೂಟರ್ ಇರಲಿಲ್ಲ, ನಿಮ್ಮ ಆರ್ಡರ್ ತೆಗೆದುಕೊಂಡು ಮೂರು ಕಿಮೀ ನಡೆದುಕೊಂಡು ಬಂದೆ. ನನ್ನ ಬಳಿ ಇದ್ದ ಒಂದಷ್ಟು ಹಣವನ್ನು ನನ್ನ ಫ್ಲಾಟ್‌ಮೇಟ್ ಕಿತ್ತುಕೊಂಡು ಹೋಗಿದ್ದಾನೆ. ಹಾಗಾಗಿ ನನಗೆ 235 ರೂ.ಗಳ ಸಾಲ ಸೃಷ್ಟಿಯಾಗಿದ್ದು, ನನ್ನ ಯುಲು ಬೈಕ್ ಚಾರ್ಜ್ ಮಾಡಲು ಆಗಲಿಲ್ಲ. ನನ್ನ ಮನೆಯ ಬಾಡಿಗೆದಾರರಿಗೆ ಪಾವತಿ ಮಾಡಲು ನನ್ನ ಬಳಿ ಏನೂ ಉಳಿದಿಲ್ಲ. ಈ ಆರ್ಡರ್‌ನಿಂದ ನನಗೆ ಸಿಗುವುದು 20-25 ರೂಪಾಯಿಗಳು, ಮತ್ತು 12ಕ್ಕೂ ಮುನ್ನ ನಾನು ಮತ್ತೊಂದು ಆರ್ಡರ್ ತೆಗೆದುಕೊಳ್ಳಬೇಕು, ಇಲ್ಲವಾದಲ್ಲಿ ಆವರು ನನ್ನನ್ನು ದೂರದ ಸ್ಥಳಗಳಿಗೆ ಡೆಲಿವರಿ ಮಾಡಲು ಕಳುಹಿಸುತ್ತಾರೆ. ಒಂದು ವಾರದಿಂದ ನಾನು ಸರಿಯಾಗಿ ಊಟವನ್ನೂ ಮಾಡಿಲ್ಲ. ಬರೀ ನೀರು ಹಾಗೂ ಟೀ ಕುಡಿದು ದಿನಗಳನ್ನು ತಳ್ಳುತ್ತಿದ್ದೇನೆ. ನಾನು ನಿಮ್ಮ ಬಳಿ ಏನನ್ನೂ ಕೇಳುತ್ತಿಲ್ಲ. ಸಾಧ್ಯವಾದರೆ ಒಂದು ಕೆಲಸ ಕೊಡಿಸಿ. ನನಗೆ ಈ ಹಿಂದೆ 25 ಸಾವಿರ ರೂ. ಸಂಬಳ ಬರುತ್ತಿತ್ತು. ನನಗೆ ಈಗ 30 ವರ್ಷ ವಯಸ್ಸು. ಹೆತ್ತವರಿಗೆ ವಯಸ್ಸಾಗುತ್ತಿದೆ ಹಾಗಾಗಿ ಅವರಿಂದ ಹಣ ಕೇಳಲು ಆಗುವುದಿಲ್ಲ,” ಎಂದು ಈ ಡೆಲಿವರಿ ಏಜೆಂಟ್ ಪ್ರಿಯಾಶಿರ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಯುವಕನ ಇಮೇಲ್ ವಿಳಾಸ, ಅಂಕಪಟ್ಟಿಗಳು, ಪ್ರಮಾಣ ಪತ್ರಗಳು ಹಾಗೂ ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಿದ ಪ್ರಿಯಾಶಿ, “ಆಫೀಸ್ ಬಾಯ್, ಅಡ್ಮಿನ್ ವರ್ಕ್, ಗ್ರಾಹಕ ಸೇವೆ, ಇತ್ಯಾದಿಗಳಲ್ಲಿ ಯಾವುದಾದರೂ ಓಪನಿಂಗ್ ಇದ್ದರೆ ದಯವಿಟ್ಟು ಈತನಿಗೆ ನೆರವಾಗಿ!” ಎಂದು ನೆಟ್ಟಿಗರಲ್ಲಿ ವಿನಂತಿಸಿಕೊಂಡಿದ್ದಾರೆ. ಸಾಹೀಲ್‌ಗೆ ಕೊನೆಗೂ ಕೆಲಸ ಸಿಕ್ಕಿದೆ ಎಂದು ಪ್ರಿಯಾಶಿ ಬಳಿಕ ಪೋಸ್ಟ್ ಒಂದರ ಮೂಲಕ ತಿಳಿಸಿದ್ದಾರೆ.