ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಆರೋಗ್ಯದ ಕುರಿತಂತೆ ಭಕ್ತರಿಗೆ ಶಾಕಿಂಗ್ ಸುದ್ದಿಯೊಂದಿದೆ. ಸದ್ಗುರು ಇತ್ತೀಚೆಗಷ್ಟೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವದ ಕಾರಣ ಸರ್ಜರಿಗೆ ಒಳಗಾಗಬೇಕಾಯಿತು ಎಂದು ಇಶಾ ಫೌಂಡೇಶನ್ ಮಾಹಿತಿ ನೀಡಿದೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಮೆದುಳಿನಲ್ಲಿ ಮಾರಣಾಂತಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಸದ್ಗುರು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸ್ಥಿತಿ ನಿರೀಕ್ಷೆಗೂ ಮೀರಿ ಸುಧಾರಿಸುತ್ತಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೇಳಿದೆ.
ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವ ಏಕೆ ಸಂಭವಿಸುತ್ತದೆ?
ತಜ್ಞರ ಪ್ರಕಾರ ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವವು ಇಂಟ್ರಾಕ್ರೇನಿಯಲ್ ಹೆಮರೇಜ್ ಎಂದು ಕರೆಯಲ್ಪಡುವ ಗಂಭೀರ ವೈದ್ಯಕೀಯ ಸ್ಥಿತಿಯಾಗಿದೆ. ಮೆದುಳಿನಲ್ಲಿ ದ್ರವದ ರಚನೆಯು ಹೆಚ್ಚಾದಾಗ ಅಥವಾ ಮೆದುಳಿನ ನರಗಳು ಸಿಡಿದಾಗ ಈ ಸ್ಥಿತಿಯು ಸಂಭವಿಸುತ್ತದೆ. ಇದರಿಂದ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುತ್ತದೆ.
ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವಕ್ಕೆ ಕಾರಣ…
ಅಧಿಕ ರಕ್ತದೊತ್ತಡ, ತಲೆಗೆ ಗಾಯ, ರಕ್ತ ಹೆಪ್ಪುಗಟ್ಟುವಿಕೆ, ಮೆದುಳಿನ ಗೆಡ್ಡೆ ಮತ್ತು ಸೋಂಕು ಸೇರಿದಂತೆ ಅನೇಕ ಕಾರಣಗಳಿಂದ ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವ ಸಂಭವಿಸುತ್ತದೆ. ಆದರೆ ಸದ್ಗುರು ಈ ರೀತಿಯ ಅನಾರೋಗ್ಯಕ್ಕೆ ತುತ್ತಾಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
ಮೆದುಳಿನಲ್ಲಿ ಊತ ಮತ್ತು ರಕ್ತಸ್ರಾವ ಉಂಟಾದಾಗ ಹಠಾತ್ತನೆ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ದೌರ್ಬಲ್ಯ, ಮರಗಟ್ಟುವಿಕೆ, ತಲೆತಿರುಗುವಿಕೆ, ಮಾತನಾಡಲು ತೊಂದರೆ, ದೃಷ್ಟಿ ಸಮಸ್ಯೆಗಳು ಮತ್ತು ಪ್ರಜ್ಞೆಯ ಮಟ್ಟ ಕಡಿಮೆಯಾಗಬಹುದು.
ಶಸ್ತ್ರಚಿಕಿತ್ಸೆಯ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲಾಗುತ್ತದೆ. ಮೆದುಳಿನ ಊತವನ್ನು ಕಡಿಮೆ ಮಾಡಿ, ಹಾನಿಗೊಳಗಾದ ಭಾಗಗಳಿಗೆ ಚೇತರಿಕೆ ನೀಡಲಾಗುತ್ತದೆ. ಚಿಕಿತ್ಸೆಯು ರೋಗಿಯ ಸ್ಥಿತಿಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಇದು ಔಷಧಿಗಳು, ಶಸ್ತ್ರಚಿಕಿತ್ಸೆ ಅಥವಾ ಎರಡರ ಸಂಯೋಜನೆಯನ್ನು ಒಳಗೊಂಡಿರಬಹುದು.