ಪಾಯಸ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ರುಚಿಕರವಾದ ಪಾಯಸವನ್ನು ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಹೆಸರುಬೇಳೆ, 10, ಹಲಸಿನಹಣ್ಣಿನ ತೊಳೆ, 1 ಕಪ್ – ಕಾಯಿ ತುರಿ, 1 ಕಪ್ – ಬೆಲ್ಲ, 1 ಟೇಬಲ್ ಸ್ಪೂನ್ ದ್ರಾಕ್ಷಿ, 8 ಗೋಡಂಬಿ, ಏಲಕ್ಕಿ – ಚಿಟಿಕೆ, ತುಪ್ಪ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಹೆಸರುಬೇಳೆ ಹಾಕಿ ಪರಿಮಳ ಬರುವವರಗೆ ಹುರಿದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಇದನ್ನು ಒಂದು ಕುಕ್ಕರ್ ಗೆ ಹಾಕಿ 1 ಕಪ್ ನೀರು ಹಾಕಿ 4 ವಿಷಲ್ ಕೂಗಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ಮೇಲೆ ಈ ಬೇಳೆಯನ್ನು ಮೆತ್ತಗಾಗುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ½ ಕಪ್ ನೀರು ಹಾಕಿ ಕುದಿಸಿಕೊಳ್ಳಿ. ಪಾಕ ಬರುವುದು ಬೇಡ. ನಂತರ ಬೆಲ್ಲದ ನೀರನ್ನು ಸೋಸಿಕೊಳ್ಳಿ. ಹಲಸಿನಹಣ್ಣಿನ ತೊಳೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ ಅದೇ ಪಾತ್ರೆಗೆ ಬೇಯಿಸಿದ ಬೇಳೆ, ಬೆಲ್ಲದ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ತುಂಬಾ ದಪ್ಪಗಾಗಿದ್ದರೆ ನೀರು ಬೇಕಿದ್ದರೆ ಸೇರಿಸಿಕೊಂಡು ಗ್ಯಾಸ್ ಮೇಲೆ ಇಟ್ಟು ಕುದಿಸಿ. 5 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿಕೊಂಡು ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಂಡು 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಏಲಕ್ಕಿ ಪುಡಿ ಸೇರಿಸಿ. ಕೊನೆಗೆ ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಹುರಿದು ಹಾಕಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಹಲಸಿನಹಣ್ಣಿನ ಪಾಯಸ ರೆಡಿ.