ಬೀಟ್ ರೂಟ್ ಸಾಂಬಾರ್, ರಸಂ, ಪಲ್ಯ ಇವನ್ನೆಲ್ಲ ತಿಂದಿರ್ತೀರಿ. ಬೀಟ್ ರೂಟ್ ಹಲ್ವಾ ಯಾವತ್ತಾದ್ರೂ ಟೇಸ್ಟ್ ಮಾಡಿದ್ದೀರಾ? ಆರೋಗ್ಯಕ್ಕೂ ಉತ್ತಮವಾಗಿರೋ ಈ ಹಲ್ವ ತಿನ್ನಲು ಸಹ ಬಲು ರುಚಿ. ಅದನ್ನು ತಯಾರಿಸುವುದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ : 2 ಚಮಚ ತುಪ್ಪ, ಸಣ್ಣಗೆ ತುರಿದ 4 ಬೀಟ್ ರೂಟ್, 1 ಕಪ್ ಹಾಲು, ಕಾಲು ಕಪ್ ಸಕ್ಕರೆ, ಸ್ವಲ್ಪ ಖೋವಾ, ಕತ್ತರಿಸಿದ ಗೋಡಂಬಿ ನಾಲ್ಕಾರು, ಏಲಕ್ಕಿ ಪುಡಿ.
ಮಾಡುವ ವಿಧಾನ : ದೊಡ್ಡ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಲು ಇಡಿ. ಅದು ಬಿಸಿಯಾಗುತ್ತಿದ್ದಂತೆ ತುರಿದ ಬೀಟ್ ರೂಟ್ ಹಾಕಿ ಮಿಕ್ಸ್ ಮಾಡಿ. 2-4 ನಿಮಿಷಗಳವರೆಗೆ ಹುರಿಯಿರಿ. ನಂತರ ಅದಕ್ಕೆ ಹಾಲು ಸೇರಿಸಿ ತಿರುವಿ. ಸುಮಾರು 20 ನಿಮಿಷಗಳವರೆಗೆ ಮುಚ್ಚಿ ಬೇಯಿಸಿ.
ಆಗಾಗ ಸೌಟಿನಲ್ಲಿ ಕೈಯ್ಯಾಡಿಸುತ್ತಿರಿ. ಸಂಪೂರ್ಣವಾಗಿ ನೀರು ಆರಿದ ಬಳಿಕ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ತುಪ್ಪ ಹಲ್ವದಿಂದ ಬೇರ್ಪಟ್ಟ ಬಳಿಕ ಅದಕ್ಕೆ ಖೋವಾ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿದ ಬಳಿಕ ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿದ್ರೆ ಸಿಹಿಯಾದ ಬೀಟ್ ರೂಟ್ ಹಲ್ವ ರೆಡಿ.