ಕುಡಿದು ಇಂಡಿಗೋ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ 63 ವರ್ಷದ ಸ್ವೀಡಿಷ್ ಪ್ರಜೆಯನ್ನು ಮುಂಬೈನಲ್ಲಿ ಗುರುವಾರ ಬಂಧಿಸಲಾಗಿದೆ.
ಆರೋಪಿ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ ಬರ್ಗ್‌ನನ್ನು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡಿದಾಗ ವಿಮಾನಯಾನ ಸಿಬ್ಬಂದಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದರು. ಆತ ಬ್ಯಾಂಕಾಕ್ ನಲ್ಲಿ ಕುಡಿದು ವಿಮಾನ ಹತ್ತಿದ್ದ.
ಊಟ ಬಡಿಸುವ ವೇಳೆ ಆರೋಪಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದ ಎಂದು ವರದಿಯಾಗಿದೆ. ವಿಮಾನ ಇಳಿಯುವವರೆಗೂ ಆತ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಲೇ ಇದ್ದ.
ಆರೋಪಿಗೆ ಚಿಕನ್ ಊಟ ನೀಡಿದ ನಂತರ ಹಣ ಪಾವತಿಸುವಂತೆ ಸಿಬ್ಬಂದಿ ಕೇಳಿದ್ದಾರೆ. ಅವನ ATM ಕಾರ್ಡ್‌ನಿಂದ POS ಯಂತ್ರದ ಮೂಲಕ ಪಾವತಿ ಮಾಡಲು ಕಾರ್ಡ್ ಅನ್ನು ಸ್ವೈಪ್ ಮಾಡುವ ನೆಪದಲ್ಲಿ ಪ್ರಯಾಣಿಕ ಸಿಬ್ಬಂದಿ ಕೈ ಹಿಡಿದಿದ್ದಾನೆ.
ಆಕೆ ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡು ಕಾರ್ಡ್ PIN ಅನ್ನು ನಮೂದಿಸಲು ಕೇಳಿದ್ದಾರೆ. ಆದರೆ ಆತ ಎಲ್ಲೆ ಮೀರಿ ವರ್ತಿಸಿದ್ದು ಇತರ ಪ್ರಯಾಣಿಕರ ಮುಂದೆ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಾನೆ.
ಆದರೆ ಆರೋಪಿ ಪರ ವಕೀಲರ ಪ್ರಕಾರ, ಪ್ರಯಾಣಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಆತನ ದೇಹವು ನಡುಗುತ್ತದೆ ಎಂದು ಹೇಳಿದ್ದಾರೆ. ಆತ ಇತರರ ಸಹಾಯವಿಲ್ಲದೆ ಸ್ವತಂತ್ರವಾಗಿ ಏನನ್ನೂ ಹಿಡಿದಿಡಲು ಸಾಧ್ಯವಿಲ್ಲ. ಆತ ಕ್ಯಾಬಿನ್ ಸಿಬ್ಬಂದಿಯನ್ನು ಸ್ಪರ್ಶಿಸಿದಾಗ ಅವರು ಪಿಒಎಸ್ ಪಾವತಿ ಕಾರ್ಡ್ ಯಂತ್ರವನ್ನು ಹಿಡಿದಿಡಲು ಪ್ರಯತ್ನಿಸಿದರು. ಅವನು ಉದ್ದೇಶಪೂರ್ವಕವಾಗಿ ಅವಳನ್ನು ಮುಟ್ಟಲಿಲ್ಲ ಎಂದಿದ್ದಾರೆ.
ಅಧಿಕಾರಿಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಬಂಧನಕ್ಕೊಳಗಾದ 8ನೇ ಅಶಿಸ್ತಿನ ವಿಮಾನ ಪ್ರಯಾಣಿಕ ಇವರಾಗಿದ್ದಾರೆ.